ಅಮಾಯಕರ ಸಾವಿಗೆ ಯಾರು ಹೊಣೆ?
ಮಾನ್ಯರೇ,
ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಯಿಂದ ದೇಶದ ಜನರು ಅನುಭವಿಸಬಹುದಾದ ಸಂಕಷ್ಟದ ವಿರುದ್ಧ ಈಶಾನ್ಯ ಭಾರತದಲ್ಲಿ ಜನ ಧರ್ಮಭೇದ ಮರೆತು ಪ್ರತಿಭಟನೆ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಶಾಂತಿಯುತ ಪ್ರತಿಭಟನೆಗೆ ಸಂವಿಧಾನದಲ್ಲಿ ಖಂಡಿತ ಅವಕಾಶವಿದೆ. ಆದರೂ ಬೇಕು ಬೇಕೆಂದೇ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಪರಿವರ್ತಿಸುವ ಸಮಾಜಘಾತುಕ ಶಕ್ತಿಗಳಿಂದ ಎಚ್ಚರವಿರಬೇಕು. ಶಾಂತಿ ಕಾಪಾಡಬೇಕು ಎಂಬ ಕರೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮ್ ಮುಖಂಡರು ನೀಡಿದ್ದರೂ ಮಂಗಳೂರಿನಲ್ಲಿ ಸ್ವಯಂ ಪ್ರೇರಿತರಾಗಿ ಕೆಲವು ಯುವಕರು ಪ್ರತಿಭಟನೆಗೆ ಇಳಿದಿದ್ದರು. ಅವರನ್ನು ನಿಯಂತ್ರಿಸಲು ಮಂಗಳೂರು ಪೊಲೀಸರು ವಿಫಲರಾಗಿರುವುದು, ಅಮಾಯಕರು ಗುಂಡಿಗೆ ಬಲಿಯಾಗಿರುವುದು ವ್ಯವಸ್ಥೆಯ ದೌರ್ಬಲ್ಯ ಎನ್ನದೆ ವಿಧಿಯಿಲ್ಲ.
ಪ್ರತಿಭಟನಾಕಾರರು ಸಂಯಮ ಪಾಲಿಸಬೇಕಾದುದು ಅವರ ಧರ್ಮವಾಗಿರುವಂತೆ ಆರಕ್ಷಕರೂ ಸಂಯಮ ಪಾಲಿಸುವುದು ಅವರ ಧರ್ಮವಲ್ಲವೇ? ಇಬ್ಬರು ಅಮಾಯಕರ ಸಾವಿಗೆ ಯಾರು ಹೊಣೆ? ಪ್ರಜ್ಞೆಯಿಲ್ಲದ ಬೇಜವಾಬ್ದಾರಿಯುತ ಆರಕ್ಷಕರೇ? ಸಮರ್ಪಕ ನಾಯಕತ್ವವಿಲ್ಲದ ಯುವಕರೇ? ಇದೀಗ ಈ ಘಟನೆಯ ಬಗ್ಗೆ ರಾಜಕೀಯ ಪಕ್ಷಗಳಿಂದ ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಯಾವುದೂ ಇದಕ್ಕೆ ಪರಿಹಾರ ಆಗಲಾರದು.ಏನೇ ಆಗಲಿ ಇಬ್ಬರು ಅಮಾಯಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದವರ ಬಗ್ಗೆ ಸೂಕ್ತ ತನಿಖೆಯಾಗಲಿ.ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ.ಮೃತರ ಕುಟುಂಬಕ್ಕೆ ಪರಿಹಾರ ಸಿಗಲಿ.ಕೋಮುಗಲಭೆಗಳಿಂದ ಮುಕ್ತವಾಗಿ ಶಾಂತಿ ಸಹೋದರತೆಯಿಂದ ಬದುಕುತ್ತಿರುವ ಕರಾವಳಿಯ ಜನತೆಯನ್ನು ಧರ್ಮದ ಹೆಸರಿನಲ್ಲಿ ವಿಭಜಿಸದ ದಕ್ಷ ಅಧಿಕಾರಿಯನ್ನು ಸರಕಾರ ನೇಮಿಸುವುದು ಇಂದಿನ ತುರ್ತು ಅಗತ್ಯವಾಗಿದೆ.







