ರಾಷ್ಟ್ರಾದ್ಯಂತ ಎನ್ ಆರ್ ಸಿ: ಅಮಿತ್ ಶಾ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿದ ಮೋದಿ!
ಗೃಹಸಚಿವರ ಹೇಳಿಕೆಗೂ ಪ್ರಧಾನಿ ಹೇಳಿಕೆಗೂ ಅಜಗಜಾಂತರ

ಹೊಸದಿಲ್ಲಿ: ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ನಿನ್ನೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಗೃಹಸಚಿವ ಅಮಿತ್ ಶಾ ಹೇಳಿಕೆಗಳಿಗಿಂತ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.
ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡಿದ ಅವರು, ಅಸ್ಸಾಂ ಹೊರತಾಗಿ ದೇಶದ ಇತರ ಭಾಗಗಳಲ್ಲಿ ಎನ್ ಆರ್ ಸಿ ಜಾರಿ ಬಗ್ಗೆ ತನ್ನ ಸರಕಾರವು ಎಂದಿಗೂ ಚರ್ಚಿಸಿಲ್ಲ ಎಂದರು.
"2014ರಲ್ಲಿ ನನ್ನ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಇಂದಿನವರೆಗೂ ಎಂದಿಗೂ ಎನ್ ಆರ್ ಸಿ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ನಾನು ದೇಶದ 130 ಕೋಟಿ ಜನರಿಗೆ ಹೇಳಲು ಬಯಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಾವು ಅಸ್ಸಾಂನಲ್ಲಿ ಮಾತ್ರ ಅದನ್ನು ಜಾರಿಗೆ ತಂದಿದ್ದೇವೆ" ಎಂದು ಪ್ರಧಾನಿ ಹೇಳಿದರು.
ಅಮಿತ್ ಶಾ ಹೇಳಿದ್ದೇನು?
ಆದರೆ ಪ್ರಧಾನಿ ಮೋದಿಯವರ ಭಾಷಣ ಈ ಹಿಂದೆ ಅಮಿತ್ ಶಾ ನೀಡಿದ್ದ ಹೇಳಿಕೆಗಳಿಗಿಂತ ತದ್ವಿರುದ್ಧವಾಗಿದೆ. ಅಕ್ರಮ ವಲಸಿಗರನ್ನು ಹೊರಹಾಕಲು ರಾಷ್ಟ್ರಾದ್ಯಂತ ಎನ್ ಆರ್ ಸಿ ಜಾರಿಗೊಳಿಸಲಾಗುವುದು ಎಂದು ಈ ಹಿಂದೆ ಅಮಿತ್ ಶಾ ಹಲವೆಡೆ ಹೇಳಿದ್ದರು.
ಮೋದಿ ಸರಕಾರವು ಎನ್ ಆರ್ ಸಿಯನ್ನು ರಾಷ್ಟ್ರಾದ್ಯಂತ ಜಾರಿಗೊಳಿಸುವುದು ಖಚಿತ. ಇದು ಜಾರಿಯಾದಾಗ ಒಬ್ಬನೇ ಒಬ್ಬ ಅಕ್ರಮ ವಲಸಿಗ ದೇಶದಲ್ಲಿ ಇರುವುದಿಲ್ಲ ಎಂದು ಶಾ ಹೇಳಿದ್ದರು.
ಜಾರ್ಖಂಡ್ ನ ಚುನಾವಣಾ ರ್ಯಾಲಿಯಲ್ಲೂ ಅಮಿತ್ ಶಾ ಎನ್ ಆರ್ ಸಿ ಡೆಡ್ ಲೈನನ್ನು ತಿಳಿಸಿದ್ದರು. 2024ರ ಲೋಕಸಭಾ ಚುನಾವಣೆಗಿಂತ ಮೊದಲು ಎನ್ ಆರ್ ಸಿ ಜಾರಿಯ ಬಗ್ಗೆ ಅವರು ಸುಳಿವು ನೀಡಿದ್ದರು.
ಬಿಜೆಪಿಯ ಚುನಾವಣಾ ಪ್ರಣಾಳಿಕೆ
ಬಿಜೆಪಿಯ 2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ದೇಶಾದ್ಯಂತ ಎನ್ ಆರ್ ಸಿ ಜಾರಿಯ ಭರವಸೆಯಿದೆ.







