ಬೆಂಗಳೂರು: ಸಿಎಎ-ಎನ್‌ಆರ್‌ಸಿ ವಿರೋಧಿಸಿ ಬೃಹತ್ ಪ್ರತಿಭಟನೆ; ಸ್ವಯಂಪ್ರೇರಿತ ಬಂದ್

ಬೆಂಗಳೂರು, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ಸ್ವಯಂ ಪ್ರೇರಿತ ಅಂಗಡಿಗಳನ್ನು ಬಂದ್ ಮಾಡಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ಇಲ್ಲಿನ ಬಿಟಿಎಂ ಲೇಔಟ್, ಜಯನಗರ, ಯಾರಬ್‌ನಗರ, ಶಿವಾಜಿನಗರ, ಆರ್‌ಟಿ ನಗರ, ವಸಂತನಗರ, ಚಾಮರಾಜಪೇಟೆ, ಗೌರಿಪಾಳ್ಯ, ಗುರಪ್ಪನಪಾಳ್ಯ ಸೇರಿದಂತೆ ಹಲವು ಕಡೆ ಮುಸ್ಲಿಮರು, ತಮ್ಮ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನವರೆಗೂ ಸ್ವಯಂ ಪ್ರೇರಿತ ಬಂದ್ ಮಾಡಿದರು.
ಬಳಿಕ ಇಲ್ಲಿನ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ಅಖಿಲ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ಆಯೋಜಿಸಿದ್ದ, ನಾವು ಭಾರತದ ಜನರು ಸಿಎಎ ಮತ್ತು ಎನ್‌ಆರ್‌ಸಿ ಅನ್ನು ತಿರಸ್ಕರಿಸಿ ಸಮಾವೇಶದಲ್ಲಿ ಲಕ್ಷಾಂತರ ಮುಸ್ಲಿಮರು ಭಾಗಿಯಾದರು. ಇಲ್ಲಿನ ಈದ್ಗಾ ಮೈದಾನ, ಮಿಲ್ಸರ್ಸ್ ರಸ್ತೆ ಮತ್ತು ನಂದಿದುರ್ಗಾಮ ಜಯಮಹಲ್ ರಸ್ತೆ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಉದ್ದಕ್ಕೂ ಸಹಸ್ರಾರು ಜನರು ಸಾಲು ಸಾಲಾಗಿ ನಿಂತಿದ್ದ ದೃಶ್ಯಗಳೇ ಕಾಣುತ್ತಿದ್ದವು.
ಸಂವಿಧಾನವನ್ನು ತೆಗೆಯಲು ಸಂಘಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮುಂದುವರೆಸಬೇಕು. ಜೊತೆಗೆ, ಸಿಎಎ- ಎನ್‌ಆರ್‌ಸಿ ಪ್ರಕ್ರಿಯೆ ಅನ್ನು ಕೇಂದ್ರ ಸರಕಾರ ಕೈಬಿಡುವರೆಗೂ ನಾವು ಹೋರಾಟ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಸಮಾವೇಶದಲ್ಲಿ ಭಾಗಿಯಾಗಿದ್ದ ಬಹುತೇಕ ಮಂದಿ ತ್ರಿರಂಗ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದು, ಇಡೀ ಮೈದಾನ ಮಾತ್ರವಲ್ಲದೆ, ರಸ್ತೆ ಉದ್ದಕ್ಕೂ ದೇಶದ ಧ್ವಜವೇ ರಾರಾಜಿಸುತಿತ್ತು. ಇನ್ನು, ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೃಹತ್ ಸಮಾವೇಶದಲ್ಲಿ ಮೌಲಾನ ಸಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ನಿರ್ಣಯಗಳನ್ನು ಓದಿದರು. ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮುಖಂಡ ಮೌಲಾನ ಮುಸ್ತಫಾ ರಿಫಾಯಿ, ಜಮಾತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲಾನ ಸಯ್ಯದ್ ತನ್ವೀರ್ ಹಾಶ್ಮಿ, ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಬಿಲಾಲ್ ಮಸ್ಜಿದ್ ಅಧ್ಯಕ್ಷ ಅಮೀರ್ ಜಾನ್, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಇಫ್ತಿಖಾರ್ ಅಹ್ಮದ್ ಖಾಸ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗುಲಾಬಿ-ಶಾಂತಿ-ಶ್ಲಾಘನೆ
ನಗರದ ವ್ಯಾಪ್ತಿಯಲ್ಲಿ ನಡೆದ ಸಿಎಎ ವಿರೋಧಿಸಿ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು. ವಿವಿಧ ಕಡೆಯಿಂದ ಕಾಲ್ನಡಿಗೆ ಮೂಲಕ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನಕ್ಕೆ ಆಗಮಿಸಿದ ಪ್ರತಿಭಟನಾಕಾರ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಾಂತಿಯುವ ಮೆರವಣಿಗೆಗೆ ಭದ್ರತೆ ಒದಗಿಸಿದ ಪೊಲೀಸರ ಕರ್ತವ್ಯಕ್ಕೆ ಹಲವರು ಪೊಲೀಸ್ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಶ್ಲಾಘಿಸಿದರು.
ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್
ನಗರದ ಹಲವು ಕಡೆ ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದೇ ರೀತಿ, ಬೃಹತ್ ಕಟ್ಟಡ ಮತ್ತು ಗಾಜಿನ ಕಟ್ಟಡಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರು.
ಜಾತ್ಯತೀತ ತತ್ವವು ನಮ್ಮ ಸಂವಿಧಾನದ ಆತ್ಮವಾಗಿದೆ. ಸಿಎಎ ನಮ್ಮ ಜಾತ್ಯತೀತತೆಯನ್ನು ನಾಶ ಮಾಡಲಿದೆ. ಆದ್ದರಿಂದ ಈ ಕಾಯ್ದೆ ಜಾರಿಗೆ ಬರದಂತೆ ನಿರಂತರ ಹೋರಾಟ ನಡೆಯಬೇಕು.
-ವಿ.ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ, ಸುಪ್ರೀಂಕೋರ್ಟ್
ಸಿಎಎ-ಎನ್‌ಆರ್‌ಸಿ ಅಂಶಗಳನ್ನು ಕೇಂದ್ರ ಸರಕಾರ ಕೈಬಿಡಬೇಕು. ಇಲ್ಲದಿದ್ದರೆ, ನಾವು ಹೋರಾಟ ಮುಂದುವರೆಸುತ್ತೇವೆ. ನಮ್ಮ ಪ್ರಾಣ ಹೋದರೂ, ಚಿಂತೆ ಇಲ್ಲ.
-ಮೌಲಾನ ಇಮ್ರಾನ್ ಮಕ್ಸೂದ್, ಖತೀಬ್, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿ
ಕೇಂದ್ರ ಸರಕಾರ ನಮ್ಮ ನ್ಯಾಯಯುತ ಹೋರಾಟಗಳಿಗೆ ಬೆಲೆ ನೀಡಲಿದೆ ಎನ್ನುವ ವಿಶ್ವಾಸ ಇದೆ. ಈಗಲಾದರೂ, ಇಂತಹ ಕಾಯ್ದೆಗಳನ್ನು ಹಿಂದಕ್ಕೆ ಪಡೆದು, ಜನರ ಆತಂಕವನ್ನು ದೂರಗೊಳಿಸಬೇಕು.
-ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ
ನಾನೇ ಮೊದಲು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮಾಡಿಸುವುದಿಲ್ಲ. ಅಷ್ಟೇ ಅಲ್ಲದೆ, ಅಕ್ರಮ ವಲಸಿಗರ ಬಂಧನ ಶಿಬಿರಕ್ಕೆ ನನ್ನನ್ನೇ ಮೊದಲು ಕಳುಹಿಸಿ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸವಾಲು ಹಾಕಿದರು.
ಪ್ರಮುಖ ನಿರ್ಣಯಗಳು
* ಕೇಂದ್ರ ಸರಕಾರ ಶೀಘ್ರವಾಗಿ ಈ ಕಾನೂನು ಹಿಂಪಡೆಯಬೇಕು
* ಯಾವ ರಾಜ್ಯದಲ್ಲಿಯೂ ಎನ್‌ಆರ್‌ಸಿ-ಸಿಎಎ ಜಾರಿಗೊಳಿಸುವುದಿಲ್ಲ ಎಂದು ಘೋಷಣೆ ಮಾಡಬೇಕು
* ಶಾಂತಿಯುತ ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸಿ, ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು.










