ನೊಂದ ಹೆಣ್ಣು ಮಕ್ಕಳ ಪರವಾಗಿ ಪ್ರಶಸ್ತಿ ಸ್ವೀಕರಿಸುವೆ: ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಾ

ಬೆಂಗಳೂರು, ಡಿ.23: ನೊಂದ ಹೆಣ್ಣು ಮಕ್ಕಳ ಪರವಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸ್ವೀಕರಿಸಲು ನಿರ್ಧರಿಸಿರುವೆ ಎಂದು ಪ್ರಶಸ್ತಿ ಪುರಸ್ಕೃತರಾದ ಹಿರಿಯ ಲೇಖಕಿ ಡಾ.ವಿಜಯಾ ಹೇಳಿದ್ದಾರೆ.
ಸೋಮವಾರ ನಗರದ ಕೆಯುಡಬ್ಲೂಜೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿಗಳಿಂದ ಬಂದ ಹಣವನ್ನು ನಾನು ಸಾಮಾಜಿಕ ಸೇವಾ ಕಾರ್ಯಗಳಿಗೆ, ಸಂಘ ಸಂಸ್ಥೆಗಳಿಗೆ ನೀಡುತ್ತಾ ಬಂದಿದ್ದೇನೆ. ಈಗಲೂ ಈ ಪ್ರಶಸ್ತಿ ಮೊತ್ತವನ್ನು ಸಂಘ ಸಂಸ್ಥೆಗಳಿಗೆ ನೀಡುವುದಾಗಿ ಹೇಳಿದರು.
ಕೆಯುಡಬ್ಲೂಜೆ ಜೊತೆಗೆ ನನ್ನ ಅವಿನಾಭಾವ ಸಂಬಂಧ ಇದೆ. ಇಲ್ಲಿ ಕಲ್ಲು ಬಿಲ್ಡಿಂಗ್ ಇದ್ದಾಗಿನಿಂದಲೂ ನನ್ನ ನಂಟು ಇದೆ. ಇವತ್ತು ನನ್ನ ಕರೆದು ಗೌರವಿಸಿದ್ದು ಸಂತಸ ತಂದಿದೆ. ಪತ್ರಕರ್ತರು ನೊಂದವರ, ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪತ್ರಕರ್ತ ರವೀಂದ್ರ ಭಟ್ ಮಾತನಾಡಿ, ನಮ್ಮೆಲ್ಲರ ಪ್ರೀತಿಯ ಅಮ್ಮನ ಗೌರವಕ್ಕೆ ಪಾತ್ರರಾದ ವಿಜಯಮ್ಮ ಅವರನ್ನು ಗೌರವಿಸುವ ಮೂಲಕ ಕೆಯುಡಬ್ಯ್ಲೂಜೆ ಉತ್ತಮ ಕೆಲಸ ಮಾಡಿದೆ. ವಿಜಯಮ್ಮ ಬದುಕು ಎಲ್ಲರಿಗೂ ಪ್ರೇರಕ ಶಕ್ತಿ ಎಂದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಮಾತನಾಡಿ, ಅನೇಕ ಯುವ ಪತ್ರಕರ್ತರಿಗೆ ದಾರಿದೀಪವಾಗಿ, ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ಡಾ.ವಿಜಯಾ ಅವರು ನಮ್ಮೆಲ್ಲರಿಗೆ ಅಮ್ಮನ ಪ್ರೀತಿ ನೀಡಿ ಜನ ಮಾನಸದಲ್ಲಿ ನೆಲೆಸಿದರು ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಾಹಿತಿಯಾಗಿ, ಸಂಘಟಕಿಯಾಗಿ, ಪತ್ರಕರ್ತೆಯಾಗಿ ವಿಜಯಮ್ಮ ಸೇವೆ ಅನನ್ಯ ಎಂದರು. ಕಾರ್ಯಕ್ರಮದಲ್ಲಿ ಕೆಯುಡಬ್ಲೂಜೆ ಖಜಾಂಚಿ ಡಾ.ಉಮೇಶ್ವರ, ಅಧ್ಯಕ್ಷ ಸೋಮಶೇಖರ್ ಗಾಂಧಿ ಉಪಸ್ಥಿತರಿದ್ದರು.







