ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ದೌರ್ಜನ್ಯ: ಎಡಿಟರ್ಸ್ ಗಿಲ್ಡ್ ಖಂಡನೆ
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ

ಪೊಲೀಸ್ ಲಾಠಿಚಾರ್ಜ್ ನಿಂದ ಗಾಯಗೊಂಡ 'ವಾರ್ತಾ ಭಾರತಿ' ವರದಿಗಾರ
ಹೊಸದಿಲ್ಲಿ: ಕರ್ನಾಟಕ ಹಾಗೂ ಉತ್ತರ ಪ್ರದೇಶದ ವಿವಿಧೆಡೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ವೇಳೆ ಪತ್ರಕರ್ತರ ಮೇಲೆ ನಡೆದಿರುವ ದೌರ್ಜನ್ಯವನ್ನು 'ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ' ಖಂಡಿಸಿದೆ. ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಸದ್ದಡಗಿಸುವ ಯತ್ನ ಎಂದು ಅದು ಹೇಳಿದೆ.
ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವೇಳೆ ಹಲವಾರು ಪತ್ರಕರ್ತರನ್ನು ಪೊಲೀಸರು ವಶಪಡಿಸಿಕೊಂಡಿದ್ದರಲ್ಲದೆ, ಲಕ್ನೋದಲ್ಲಿ 'ದಿ ಹಿಂದೂ' ಪತ್ರಿಕೆಯ ವರದಿಗಾರ ಉಮರ್ ರಶೀದ್ ಅವರನ್ನೂ ವಶಪಡಿಸಿಕೊಳ್ಳಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
ಪತ್ರಕರ್ತರು ಪ್ರತಿಭಟನಾ ಸ್ಥಳಗಳಲ್ಲಿ ವರದಿ ಮಾಡುವ ತಮ್ಮ ಸಂವಿಧಾನದತ್ತ ಕರ್ತವ್ಯವನ್ನು ನಿಭಾಯಿಸಲು ಬಂದವರು ಎಂದು ಪೊಲೀಸರು ಅರಿಯಬೇಕು ಎಂದು 'ಎಡಿಟರ್ಸ್ ಗಿಲ್ಡ್' ಹೇಳಿದೆ.
ಪತ್ರಕರ್ತರನ್ನು ಟಾರ್ಗೆಟ್ ಮಾಡವ ಬದಲು ಅವರಿಗೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಗೃಹ ಸಚಿವಾಲಯಕ್ಕೆ 'ಎಡಿಟರ್ಸ್ ಗಿಲ್ಡ್' ಹೇಳಿದೆ. ಈ ರೀತಿಯ ಹಿಂಸೆ ಹಾಗೂ ದೌರ್ಜನ್ಯದಿಂದಾಗಿ ಪ್ರತಿಭಟನೆಗಳನ್ನು ಸರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ವರದಿ ಮಾಡಲು ಪತ್ರಕರ್ತರಿಗೆ ಸಾಧ್ಯವಾಗುವುದಿಲ್ಲ ಎಂದೂ ಸಂಘಟನೆ ಹೇಳಿಕೊಂಡಿದೆ.







