ಪ್ರಧಾನಿ, ಅಮಿತ್ ಶಾ ದಿನಕ್ಕೊಂದು ಸುಳ್ಳು ಹೇಳುತ್ತಾ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ: ಶಿವಸುಂದರ್
ಭಟ್ಕಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಭಟ್ಕಳ: ಎನ್.ಆರ್.ಸಿ, ಸಿ.ಎ.ಎ. ಕುರಿತಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ದಿನಕ್ಕೊಂದು ಸುಳ್ಳುಗಳನ್ನು ಹೇಳುತ್ತ ದೇಶದ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಜನರ ಪ್ರತಿಭಟನೆಗಳಿಗೆ ಹೆದರಿ ನಾವು ಎನ್.ಆರ್.ಸಿಯನ್ನು ದೇಶಾದ್ಯಂತ ಜಾರಿ ಮಾಡಲ್ಲ ಎನ್ನುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸುಮ್ಮನೆ ತಪ್ಪನ್ನು ಒಪ್ಪಿಕೊಂಡು ಎನ್.ಆರ್.ಸಿ ಇಲ್ಲ ಎಂದು ಹೇಳಿಬಿಡಿ ನಾವು ಚಳುವಳಿಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ ಎಂದು ಖ್ಯಾತ ಅಂಕಣಕಾರ ಶಿವಸುಂದರ್ ಹೇಳಿದರು.
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಲ್ಲಿನ ಸಾಮಾಜಿಕ, ರಾಜಕೀಯ ಸಂಘಟನೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಮ್ಮ ಪೂರ್ವಿಕರ ಕಾಗದ ಪತ್ರಗಳನ್ನು ತೋರಿಸಲು ಹೇಳುವ ಈ ಎನ್.ಆರ್.ಸಿ ಗೆ ನಮ್ಮ ಧಿಕ್ಕಾರವಿದೆ. ಸಂಸದರೊಬ್ಬರು ನಮ್ಮ ಪ್ರತಿಭಟನೆಗಳನ್ನು ಹೀಯಾಳಿಸಿ ಮಾತನಾಡಿದ್ದು, ಅವರಿಗೆ ನಾನು ಕೊಡುವ ಉತ್ತರವೆಂದರೆ, ಈ ದೇಶ ನನ್ನದು ಇಲ್ಲಿನ ಸಂವಿಧಾನ ನನ್ನದು ಎಂದು ಹೇಳುವುದಕ್ಕೆ ಎದೆ ಸೀಳಿದರೆ ಇರಬೇಕಾದುದು ನಾಲ್ಕು ಅಕ್ಷರ ಅಲ್ಲ. ಎದೆ ಸೀಳಿದರೆ ದೇಶಪ್ರೇಮ, ದೇಶಭಕ್ತಿ ಹಾಗೂ ನಾವೆಲ್ಲರೂ ಒಂದು ಎನ್ನುವ ಭಾವನೆ ಅದು ನಿಮ್ಮಲ್ಲಿ ಇಲ್ಲ ಶಿವಸುಂದರ್ ಹೇಳಿದರು.
ಈ ಕಾಯ್ದೆಯು ಮುಸ್ಲಿಮರಿಗಿಂತ ಹಿಂದೂಗಳಿಗೆ ಹೆಚ್ಚಿನ ಅನಾಹುತವನ್ನು ತಂದೊಡ್ಡುತ್ತದೆ. ನೆಮ್ಮದಿಯಿಂದಿದ್ದ ದೇಶಕ್ಕೆ ಎನ್.ಆರ್.ಸಿಯಂತ ಬೆಂಕಿ ಹಾಕಿದ್ದು ಈ ದೇಶದ ಗೃಹಮಂತ್ರಿ ಅಮಿತ್ ಶಾ. ನೀವು ದೇಶದ ಇನ್ನೆಷ್ಟು ಹೆಣವನ್ನು ಕೆಡುವುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿದರು. ಎನ್.ಅರ್.ಸಿಯ ಹೋರಾಟ ಇದು ಹಿಂದೂ ಮುಸ್ಲಿಮ್ ಒಕ್ಕೂಟದ ಹೋರಾಟವಾಗಿದೆ ಎಂದು ಶಿವಸುಂದರ್ ತಿಳಿಸಿದರು.
ತಂಝಿಮ್ ಮಾಜಿ ಅಧ್ಯಕ್ಷ ನ್ಯಾಯವಾದಿ ಮುಝಮ್ಮಿಲ್ ಕಾಝಿಯಾ ಮಾತನಾಡಿ ನಮ್ಮ ಸಂವಿಧಾನ ಅಪಾಯದಲ್ಲಿದೆ ಮೋದಿಯವರೇ, ನಾವು ಭಾರತದ ಪೌರರಾಗಿದ್ದೇವೆ. ನಮಗೆ ಯಾವುದೇ ಪರೀಕ್ಷೆ ಮಾಡುವ ಅಗತ್ಯವಿಲ್ಲ. ದೇಶದಲ್ಲಿ ಕರಾಳ ಕಾನೂನು ರೂಪಿಸುತ್ತಿದ್ದೀರಿ, ಇಂತಹ ಕಾನೂನು ವಿರುದ್ಧ ನಾವು ನಿರಂತರವಾಗಿ ಹೋರಾಡುತ್ತೇವೆ. ದೇಶದಲ್ಲಷ್ಟೆ ಅಲ್ಲದೆ ಹೊರದೇಶಗಳಲ್ಲಿಯೂ ಇದು ಮುಂದುವರೆದಿದೆ. ನಮ್ಮನ್ನು ಪೌರತ್ವದಿಂದ ತಡೆಯುವುದು ಮೋದಿ ಮತ್ತು ಅಮೀತ್ ಶಾರ ಕೈಯಿಂದಾಗದು. ನಾವು ನಿಮ್ಮಗೆ ಅಧಿಕಾರ ಕೊಟ್ಟಿದ್ದೇವೆ. ಅಧಿಕಾರವನ್ನು ಕಸಿದುಕೊಳ್ಳುವುದು ನಮಗೆ ಗೊತ್ತಿದೆ ಎಂದರು. ಭಟ್ಕಳದ ಇತಿಹಾಸದಲ್ಲೆ ಇಂತಹ ಪ್ರತಿಭಟನೆ ನಾನು ಕಂಡಿಲ್ಲ. ಇಂದು ಪುರುಷರು ಪ್ರತಿಭಟನೆಗಿಳಿದ್ದಾರೆ ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ರಸ್ತೆಗಿಳಿಯಲಿದ್ದಾರೆ ಎಂದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಪ್ರತಿಭಟನಾ ಸಮಾವೇಶದ ಸಂಚಾಲಕ ಇನಾಯತುಲ್ಲಾ ಶಾಬಂದ್ರಿ, ಸಿಪಿಐ(ಎಂ) ಮುಖಂಡರಾದ ಡಾ.ಕೆ.ಪ್ರಕಾಶ, ಯಮುನಾ ಗಾಂವ್ಕರ್, ಕಾಂಗ್ರೆಸ್ ಅಧ್ಯಕ್ಷ ನ್ಯಾಯಾವಾದಿ ಸಂತೋಷ್ ನಾಯ್ಕ್, ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್.ನಾಯ್ಕ, ಮೌಲಾನ ಇಕ್ಬಾಲ್ ನಾಯತೆ ನದ್ವಿ, ಪೌರತ್ವ ತಿದ್ದುಪಡೆ ಕಾಯ್ದೆ ಹಾಗೂ ಎನ್.ಆರ್.ಸಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು. ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೆಝ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ತಂಝೀಮ್ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಹನೀಫ್ ಶಬಾಬ್ ಕಾರ್ಯಕ್ರಮ ನಿರೂಪಿಸಿದರು. ತಂಝೀಮ್ ಸದಸ್ಯ ನ್ಯಾಯವಾದಿ ಇಮ್ರಾನ್ ಲಂಕಾ ಮನವಿ ಪತ್ರವನ್ನು ಓದಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾರ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಶಾಬಂದ್ರಿ ಪಟೇಲ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಪ್ರತಿಭಟನೆಗೆ ವಿವಿಧ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಬೆಂಬಲ ವ್ಯಕ್ತಪಡಿಸಿದರೆ, ರಿಕ್ಷಾ ಚಾಲಕ ಮಾಲಕ ಸಂಘದವರು ಅಟೋರಿಕ್ಷಾವನ್ನು ಸ್ಥಗಿತಗೊಳಿಸುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ನಗರದ ಬಹುತೇಕ ಹಿಂದೂ-ಹಾಗೂ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವುದರ ಮೂಲಕ ಪ್ರತಿಭಟನೆ ವ್ಯಾಪಕ ಬೆಂಬಲ ವ್ಯಕ್ತಪಡಿದರು.














