ಶ್ರೀಲಂಕಾ ಟ್ವೆಂಟಿ-20, ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ
ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್ ವಾಪಸ್, ರೋಹಿತ್, ಶಮಿಗೆ ವಿಶ್ರಾಂತಿ

file photo
ಮುಂಬೈ, ಡಿ.23: ಮಂದಿನ ವರ್ಷದ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಹಾಗೂ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.
ಶ್ರೀಲಂಕಾ ವಿರುದ್ಧ ಜನವರಿ 5ರಿಂದ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಮುಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಸೋಮವಾರ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ತಂಡವನ್ನು ಪ್ರಕಟಿಸಿದೆ.
ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ ಜನವರಿ 5ರಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಜ.14ರಿಂದ ಆರಂಭವಾಗುತ್ತದೆ. ರೋಹಿತ್ ಶರ್ಮಾ ಅವರು ವಿಶ್ವಕಪ್ 2019ರಿಂದ ಭಾರತದ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ಟೆಸ್ಟ್ನಲ್ಲಿ ಓಪನರ್ ಆಗಿ ಮಿಂಚಿದ್ದಾರೆ. ನಿರಂತರ ಆಟದಿಂದ ದಣಿದಿರುವ ಶರ್ಮಾಗೆ ಇದೀಗ ಲಂಕಾ ವಿರುದ್ಧ ಸರಣಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ರೋಹಿತ್ ಶರ್ಮಾ 47 ಪಂದ್ಯಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯನ್ನು ಗಾಯದಿಂದ ತಪ್ಪಿಸಿಕೊಂಡ ಶಿಖರ್ ಧವನ್ ಅವರು ಟ್ವೆಂಟಿ- 20 ಮತ್ತು ಏಕದಿನ ತಂಡಗಳ ಸೇವೆಗೆ ಇದೀಗ ಸಿದ್ಧರಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಅವರು ಲೋಕೇಶ್ ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕೇರಳದ ಸಂಜು ಸ್ಯಾಮ್ಸನ್ ಕೂಡಾ ತಂಡದಲ್ಲಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಟ್ವೆಂಟಿ-20 ಮತ್ತು ಏಕದಿನ ಪಂದ್ಯಗಳಿಗೆ ಮತ್ತೆ ಬುಮ್ರಾ ಫಿಟ್ಆಗಿದ್ದಾರೆ. ಭಾರತದ ವಿಶ್ವಕಪ್ 2019 ರ ಅಭಿಯಾನದ ಬಳಿಕ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬುಮ್ರಾ ಭಾಗವಹಿಸಿದ್ದರು. ಬಳಿಕ ಗಾಯದ ಕಾರಣದಿಂದಾಗಿ ತಂಡದಿಂದ ದೂರವಾಗಿದ್ದರು.
ವೇಗಿ ದೀಪಕ್ ಚಹರ್ ಮುಂದಿನ ಐಪಿಎಲ್ ತನಕ ಆಡುವ ಸಾಧ್ಯತೆ ಇಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ನವ್ದೀಪ್ ಸೈನಿ ಮುಂದುವರಿಯಲಿದ್ದಾರೆ. ಸೈನಿ ವಿಂಡೀಸ್ ವಿರುದ್ದ ಮೂರನೇ ಏಕದಿನ ಪಂದ್ಯವನ್ನಾಡಿದ್ದರು. ಇದು ಅವರ ಚೊಚ್ಚಲ ಪಂದ್ಯವಾಗಿತ್ತು. ಇದರಲ್ಲಿ ಸೈನಿ 2 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು.
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸೀಮಿತ ಓವರ್ಗಳ ಸರಣಿಯನ್ನು ಬುಮ್ರಾ ತಪ್ಪಿಸಿಕೊಂಡಿದ್ದರು.
ಶ್ರೀಲಂಕಾ ವಿರುದ್ಧ ಟ್ವೆಂಟ-20 ಸರಣಿಗೆ ತಂಡ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ಕೀಪರ್), ರವೀಂದ್ರ ಜಡೇಜ, ಶಿವಮ್ ದುಬೆ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ನವ್ದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಷ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್(ವಿಕೆಟ್ ಕೀಪರ್), ಕೇದಾರ್ ಜಾಧವ್, ಶಿವಮ್ ದುಬೆ, ರವೀಂದ್ರ ಜಡೇಜ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ನವ್ದೀಪ್ ಸೈನಿ, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ. 2020ರ ಜನವರಿಯಲ್ಲಿ ನಡೆಯಲಿರುವ ಸರಣಿಯ ವೇಳಾಪಟ್ಟಿ
ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿ
ಜ.05: ಮೊದಲ ಪಂದ್ಯ ಟ್ವೆಂಟಿ-20 ಪಂದ್ಯ, ಗುವಾಹಟಿಯ ಬರಸಾಪುರ ಕ್ರೀಡಾಂಗಣ ಜ.07: ಎರಡನೇ ಟ್ವೆಂಟಿ-20 ಪಂದ್ಯ , ಇಂದೋರ್ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣ
ಜ.10: ಮೂರನೇ ಟ್ವೆಂಟಿ-20 ಪಂದ್ಯ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ
ಜ.14: ಮೊದಲ ಏಕದಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣ
ಜ.17: ಎರಡನೇ ಏಕದಿನ ಪಂದ್ಯ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಜ.19: ಮೂರನೇ ಏಕದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ







