ಪೇಜಾವರ ಶ್ರೀ ಅನಾರೋಗ್ಯ : ಮಣಿಪಾಲ ಆಸ್ಪತ್ರೆಗೆ ಉವಾಭಾರತಿ ಸಹಿತ ಹಲವು ಗಣ್ಯರ ಭೇಟಿ

ಉಡುಪಿ, ಡಿ. 23: ಮಾಜಿ ಕೇಂದ್ರ ಸಚಿವೆ ಸಾದ್ವಿ ಉಮಾ ಭಾರತಿ ಇಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ, ತನ್ನ ಗುರುಗಳಾದ ಪೇಜಾವರ ಸ್ವಾಮೀಜಿಯ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗುರುಗಳಾಗಿರುವ ಪೇಜಾವರ ಸ್ವಾಮೀಜಿಯ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸಮಾಜ ಪರಿವರ್ತಕರಾಗಿರುವ ಸ್ವಾಮೀಜಿಗೆ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಎಲ್ಲರೂ ಸ್ವಾಮೀಜಿಯ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಅವರು ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ ಎಂದರು.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ವಾಮೀಜಿ ಆರೋಗ್ಯದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪ್ರತಿ ಎರಡು ತಾಸಿಗೊಮ್ಮೆ ಆರೋಗ್ಯ ವಿಚಾರಿಸುತ್ತಿದ್ದಾರೆ. ಏಮ್ಸ್ ವೈದ್ಯರು ಹಾಗೂ ಮಣಿಪಾಲ ಆಸ್ಪತ್ರೆಯ ವೈದ್ಯರು ಪರಸ್ಪರ ಸಂಪರ್ಕ ದಲ್ಲಿದ್ದಾರೆ. ಸರ್ವಧರ್ಮೀಯರೂ ಗುರುಗಳ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಉಡುಪಿ ಬಿಷಪ್ ಭೇಟಿ: ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಣಿಪಾಲ ಆಸ್ಪತ್ರೆಗೆ ಆಗಮಿಸಿದ ಸ್ವಾಮೀಜಿಯ ಆರೋಗ್ಯ ವಿಚಾರಿಸಿದರು.
ಸ್ವಾಮೀಜಿ ಶೀಘ್ರ ಗುಣಮುಖರಾಗುವಂತೆ ನಾವು ಪ್ರಾರ್ಥಿಸುತ್ತಿದ್ದೇವೆ. ಮತ್ತೆ ಅವರು ಕೃಷ್ಣನ ಪೂಜೆ ಮಾಡುವಂತಾಗಬೇಕು. ಅವರ ಆರೋಗ್ಯ ಮರಳಿ ಬಂದು ಮೊದಲಿನಂತೆ ಆಗಬೇಕು. ಏಳು ವರ್ಷಗಳಿಂದ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದೇವೆ. ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದೇವೆ ಎಂದು ಬಿಷಪ್ ತಿಳಿಸಿದರು.
ಅದೇ ರೀತಿ ಉತ್ತರಾಧಿ ಮಠದ ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ ಹಾಗೂ ವಿದ್ಯಾಭೂಷಣ ಭೇಟಿ ನೀಡಿ ಸ್ವಾಮೀಜಿಯ ಆರೋಗ್ಯ ವಿಚಾರಿಸಿದರು.
ಸಿದ್ದರಾಮಯ್ಯ ಭೇಟಿ ರದ್ದು: ಜಮೀರ್, ಎಂ.ಬಿ.ಪಾಟೀಲ್ ಭೇಟಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗುವ ಕಾರ್ಯಕ್ರಮ ವನ್ನು ರದ್ದು ಗೊಳಿಸಿ, ಮಂಗಳೂರಿನಿಂದಲೇ ಬೆಂಗಳೂರಿಗೆ ವಾಪಾಸ್ಸು ತೆರಳಿದ್ದಾರೆ.
‘ಸಿದ್ದರಾಮಯ್ಯ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಆದರೆ ಅವರು ಮಂಗಳೂರು ಪ್ರವಾಸ ದಲ್ಲಿಯೇ ಸಾಕಷ್ಟು ಬಳಲಿ ಹೋಗಿದ್ದರು. ಅವರ ದೇಹಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಆದುದರಿಂದ ಎರಡು ಮೂರು ದಿನದಲ್ಲಿ ಅವರು ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನದ ಮೂಲಕ ಉಡುಪಿಗೆ ಬರಲಿದ್ದಾರೆ. ಈ ಬಗ್ಗೆ ಯಾರೂ ಸಣ್ಣತನದ ಆಲೋಚನೆ ಮಾಡಬಾರದು ಎಂದು ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದರು.
ಇವರೊಂದಿಗೆ ಆಗಮಿಸಿದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಪೇಜಾವರ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ್ದೇವೆ. ಸ್ವಾಮೀಜಿ ಶೀಘ್ರ ಗುಣಮುಖರಾಗಲಿ. ನಮಗೂ ಸ್ವಾಮೀಜಿಗೂ ನೇರ ಸಂಬಂಧ ಇದೆ. ಬೆಂಗಳೂರು ರಾಘವೇಂದ್ರ ಮಠ ಇರುವುದು ನಮ್ಮ ಕ್ಷೇತ್ರದಲ್ಲೇ. ವರ್ಷಕ್ಕೊಮ್ಮೆ ನಾನು ಪೇಜಾವರ ಸ್ವಾಮೀಜಿಯನ್ನು ಭೇಟಿ ಮಾಡುತ್ತೇನೆ. ನನ್ನನ್ನು ಪೇಜಾವರ ಸ್ವಾಮೀಜಿಗಳೇ ಮಠಕ್ಕೆ ಕರೆಸುತ್ತಾರೆ ಎಂದು ತಿಳಿಸಿದರು.
ಪೇಜಾವರಶ್ರೀಗಳ ಚಿಕಿತ್ಸೆಗೆ ಬೆಂಗಳೂರು ವೈದ್ಯರು
ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಗಾಗಿ ಶುಕ್ರವಾರ ಮುಂಜಾನೆಯಿಂದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶತೀರ್ಥಶ್ರೀ (89) ಆರೋಗ್ಯ ಹಿಮೋಡೈನಮಿಕಲಿ ಸ್ಥಿರವಾಗಿದ್ದು, ಈಗಲೂ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ಸೋಮವಾರ ಸಂಜೆ ಬಿಡುಗಡೆ ಗೊಳಿಸಿದ ಬುಲೆಟಿನ್‌ನಲ್ಲಿ ತಿಳಿಸಿದೆ.
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಿಗೆ ಸಹಾಯ ಮಾಡಲು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರ ತಂಡವೊಂದು ರವಿವಾರ ಮಣಿಪಾಲಕ್ಕೆ ಆಗಮಿಸಿದ್ದು, ಸ್ವಾಮೀಜಿಯವರ ಚಿಕಿತ್ಸೆಗೆ ಸಹಕರಿಸುತ್ತಿದೆ. ಅಲ್ಲದೇ ಮಣಿಪಾಲ ವೈದ್ಯರು ಹೊಸದಿಲ್ಲಿಯ ಏಮ್ಸ್ ನ ಸ್ಪೆಷಲಿಸ್ಟ್‌ರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಇಂದು ದೂರವಾಣಿ ಮೂಲಕ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಅಲ್ಲದೇ ಯಾವುದೇ ರೀತಿಯ ನೆರವಿನ ಅಗತ್ಯವಿದ್ದರೆ ತಕ್ಷಣ ತಿಳಿಸುವಂತೆ ಸೂಚಿಸಿದ್ದಾರೆ ಎಂದು ಸ್ವಾಮೀಜಿಯ ಆಪ್ತರು ತಿಳಿಸಿದ್ದಾರೆ.








