ನಮ್ಮ ಗ್ರಾಮ ನಮ್ಮ ಯೋಜನೆ : ಗುರುಪುರ ಗ್ರಾಪಂಕ್ಕೆ ರಾಷ್ಟ್ರದಲ್ಲೇ ದ್ವಿತಿಯ ಸ್ಥಾನ

ಗುರುಪುರ, ಡಿ.23: ಕೇಂದ್ರ ಸರಕಾರ ನೀಡುವ 2019ನೇ ಸಾಲಿನ ‘ನಮ್ಮ ಗ್ರಾಮ ನಮ್ಮ ಯೋಜನೆ’ಯಲ್ಲಿ ದೇಶದಲ್ಲೇ ದ್ವಿತೀಯ ಸ್ಥಾನದೊಂದಿಗೆ ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಗುರುಪುರ ಗ್ರಾಮ ಪಂಚಾಯತ್‌ನ್ನು ರವಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಶಸ್ತಿ ಹಾಗೂ ಪ್ರಮಾಣಪತ್ರದೊಂದಿಗೆ ಸನ್ಮಾನಿಸಲಾಯಿತು.
ಮಾಜಿ ಸಂಸದ, ಪಂಚಾಯತ್ ರಾಜ್ ಪರಿಷತ್‌ನ ಕಾಯಾಧ್ಯಕ್ಷ ಸಿ. ನಾರಾಯಣ ಸ್ವಾಮಿ, ಕೇಂದ್ರದ ಪಂಚಾಯತ್ ರಾಜ್ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಹಾಗೂ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಮತ್ತಿತರರು ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿಎಂ ಉದಯ ಭಟ್ ಹಾಗೂ ಪಿಡಿಒ ಅಬೂಬಕರ್ ಅವರನ್ನು ಅಭಿನಂದಿಸಿ, ಪ್ರಶಸ್ತಿ ಪ್ರದಾನಿಸಿದರು.
ಸಭೆಯಲ್ಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್, ಕೇಂದ್ರ ಪಂಚಾಯತ್ ರಾಜ್ ಮಂತ್ರಾಲಯದ ನಿವೃತ್ತ ಜಂಟಿ ಕಾರ್ಯದರ್ಶಿ ಟಿ ಆರ್ ರಘುನಂದನ್, ರಾಜ್ಯ ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಎಲ್‌ಕೆ ಅತೀಕ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ‘ದೀನ ದಯಾಳ್’ ಪುರಸ್ಕೃತ ಪಂಚಾಯತ್‌ಗೆ ಸಂದಾಯವಾದ ಅಭಿನಂದನೆ, ಪ್ರಮಾಣಪತ್ರವನ್ನು ಗುರುಪುರ ಗ್ರಾಪಂ ಕಾರ್ಯದರ್ಶಿ ಕೆ ನಿತ್ಯಾನಂದ ಸ್ವೀಕರಿಸಿದರು.







