ಮಂಗಳೂರು : ಇಬ್ಬರು ಎಸ್‌ಡಿಪಿಐ ಮುಖಂಡರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಮಂಗಳೂರು, ಡಿ. 23: ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಮತ್ತು ಗಲಭೆಗೆ ಸಂಬಂಧಿಸಿದ ಆರೋಪದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಇಬ್ಬರು ನಾಯಕರ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಎಸ್‌ಡಿಪಿಐ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿ ಸಾಹುಲ್ ಎಸ್.ಎಚ್. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರುದ್ಧ ಡಿ.18/19ರಂದು ನಡೆದ ಪ್ರತಿಭಟನೆಗೆ ವಾಟ್ಸ್‌ಆ್ಯಪ್‌ನಲ್ಲಿ ಪ್ರಚೋದನೆ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
‘ಕೇಂದ್ರ ಸರಕಾರದ ವಿರುದ್ಧ ದ್ವೇಷ ಹುಟ್ಟುವಂತೆ ಮಾಡಿ, ಜನತೆಯನ್ನು ತಪ್ಪು ದಾರಿಗೆ ಎಳೆದು ಉದ್ರೇಕಿಸಲಾಗಿದೆ. ಸರಕಾರವನ್ನು ಹೀನವಾಗಿ ದ್ವೇಷ ಭಾವನೆಯಿಂದ ಕಾಣಲಾಗಿದೆ. ಜನಸಮೂಹದ ಮಧ್ಯೆ ಭಯ ಉಂಟು ಮಾಡಿ ದ್ವೇಷದ ವಿಚಾರವನ್ನು ಹಬ್ಬಿಸುವ ಮೂಲಕ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿದ್ದಾರೆ. ಧರ್ಮಗಳು ಮತ್ತು ಸರಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ದೊಂಬಿ ನಡೆಸಲು ಉದ್ದೇಶಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 124 ಎ, 153, 34ರಂತೆ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಇದು ಸತ್ಯಕ್ಕೆ ದೂರವಾದ ವಿಚಾರ. ಪ್ರತಿಭಟನೆಗಾಗಿ ಎಸ್‌ಡಿಪಿಐ ನಾಯಕರು ಕರೆ ಕೊಟ್ಟಿಲ್ಲ. ಅದು ಎಸ್‌ಡಿಪಿಐ ಸಂಘಟಿಸಿದ ಪ್ರತಿಭಟನೆಯೂ ಅಲ್ಲ. ಅಸಂಘಟಿತವಾಗಿ ಸೇರಿದ ಜನರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ಮತ್ತು ಲಾಠಿಚಾರ್ಜ್ ಖಂಡಿಸಿ, ಪ್ರತಿಕ್ರಿಯೆ ನೀಡಿದ್ದಕ್ಕೆ ಪಕ್ಷದ ನಾಯಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ಪೊಲೀಸರ ಕ್ರೌರ್ಯದ ಇನ್ನೊಂದು ಮುಖ. ಪೊಲೀಸರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ದೇಶದ್ರೋಹ ಕೇಸು ದಾಖಲಿಸಿದ್ದರೆ ಕಾನೂನಿನ ರೀತಿಯಲ್ಲಿ ಹೋರಾಟ ನಡೆಸಲಿದ್ದೇವೆ.
- ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ







