ಮಹಿಳೆಗೆ ರಕ್ಷಣಾ ಆದೇಶ ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಇದೆ: ಹೈಕೋರ್ಟ್

ಬೆಂಗಳೂರು, ಡಿ.23: ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ವಾಸವಿರುವ ಪ್ರದೇಶದ ವ್ಯಾಪ್ತಿಯ ನ್ಯಾಯಾಲಯಗಳೂ ಸಹ ದೂರಿನ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಹಿಳೆಯೊಬ್ಬರು ತಮ್ಮ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ಬೆಂಗಳೂರಿನ 5ನೆ ಎಸಿಎಂಎಂ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸರಕಾರಿ ಶಾಲಾ ಶಿಕ್ಷಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲೇ ದೂರು ದಾಖಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸಂತ್ರಸ್ತೆ ಶಾಶ್ವತ ಅಥವಾ ತಾತ್ಕಾಲಿಕವಾಗಿ ವಾಸವಿರುವ ಪ್ರದೇಶದ ಸ್ಥಳೀಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಆಕೆಗೆ ರಕ್ಷಣೆ ಹಾಗೂ ಸೂಕ್ತ ಆದೇಶ ನೀಡಲು ಅಧಿಕಾರ ಹೊಂದಿರುತ್ತದೆ. ಈ ಕುರಿತು ಕಾಯ್ದೆಯ ಸೆಕ್ಷನ್ 27(1)(ಎ)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು: 2005ರ ಎಪ್ರಿಲ್‌ನಲ್ಲಿ ದಂಪತಿಗೆ ಮದುವೆಯಾಗಿತ್ತು. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗ್ರಾಮವೊಂದರ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಪತಿಯೊಂದಿಗೆ ಪತ್ನಿಯೂ ವಾಸವಿದ್ದರು. ಪತ್ನಿಯು 2012ರಲ್ಲಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಆರೋಪದಡಿ ಸವಣೂರು ಠಾಣೆಗೆ ದೂರು ನೀಡಿದ್ದರು. ಬಳಿಕ ಬೆಂಗಳೂರಿನಲ್ಲಿರುವ ಪಾಲಕರ ಮನೆಯಲ್ಲಿ ವಾಸವಿದ್ದ ಪತ್ನಿ, ಪತಿ ವಿರುದ್ಧ 5ನೆ ಎಸಿಎಂಎಂ ಕೋರ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದರು. ಪತ್ನಿಯ ದೂರನ್ನು ಆಕ್ಷೇಪಿಸಿ ಪತಿಯು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಅಲ್ಲದೆ, ಈ ದೂರು ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣಾ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ದೂರು ವಜಾ ಮಾಡಲು ಮನವಿ ಮಾಡಿದ್ದರು.
ಆದರೆ, ಪತಿಯ ಆಕ್ಷೇಪಣೆ ತಳ್ಳಿ ಹಾಕಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ದೂರನ್ನು ವಿಚಾರಣೆಗೆ ಅಂಗೀಕರಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸೆಷನ್ ಕೋರ್ಟ್ ಕೂಡ ವಜಾಗೊಳಿಸಿತ್ತು. ಇದರಿಂದ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ನ್ಯಾಯಪೀಠವು ಅನ್ಯಾಯಕ್ಕೊಳಗಾದ ಮಹಿಳೆ ಸಲ್ಲಿಸುವ ಅರ್ಜಿ ವಿಚಾರಣೆ ನಡೆಸಿ ಅವರಿಗೆ ಸೂಕ್ತ ರಕ್ಷಣಾ ಆದೇಶ ನೀಡಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿದೆ ಎಂಬುದನ್ನು ಕಾಯ್ದೆಯ ಸೆಕ್ಷನ್ 27ರಲ್ಲಿ ಹೇಳಲಾಗಿದೆ. ಹೀಗಾಗಿ, ಈ ಪ್ರಕರಣದಲ್ಲಿ ಅಧೀನ ನ್ಯಾಯಾಲಯಗಳು ನೀಡಿರುವ ಆದೇಶ ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.







