ಸದಾಫ್ ಜಾಫರ್‌ರನ್ನು ಭೇಟಿಯಾದ ಉ.ಪ್ರ. ಕಾಂಗ್ರೆಸ್ ನಾಯಕರು

ಲಕ್ನೋ, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಬಂಧಿತರಾಗಿ ಕಾರಾಗೃಹದಲ್ಲಿ ಇರುವ ಕಾಂಗ್ರೆಸ್ ಕಾರ್ಯಕರ್ತೆ ಸದಾಫ್ ಜಾಫರ್ ಅವರನ್ನು ಉತ್ತರಪ್ರದೇಶದ ಕಾಂಗ್ರೆಸ್ ನಾಯಕರು ಸೋಮವಾರ ಭೇಟಿಯಾಗಿದ್ದಾರೆ.
ಸದಾರ್ ಜಾಫರ್ ಅವರನ್ನು ಬಂಧಿಸಿರುವುದನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರವಿವಾರ ಖಂಡಿಸಿದ್ದರು ಹಾಗೂ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು. ‘‘ಅವರಿಗೆ ಪೊಲೀಸರು ಕ್ರೂರವಾಗಿ ಥಳಿಸಿದ್ದಾರೆ. ಅವರ ಕೂದಲು ಹಿಡಿದು ಎಳೆದಿದ್ದಾರೆ’’ ಎಂದು ಕಾರಾಗೃಹದಲ್ಲಿ ಸದಾಫ್ ಜಾಫರ್ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.
ಅಜಯ್ ಕುಮಾರ್ ಲಲ್ಲು ಜೊತೆಗೆ ಕಾಂಗ್ರೆಸ್‌ನ ಕಾರ್ಯಕಾರಿ ಪಕ್ಷದ ನಾಯಕ ಆರಾಧನ ಶುಕ್ಲಾ ಮೋನಾ ಕೂಡಾ ಇದ್ದರು. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅಜಯ್ ಕುಮಾರ್ ಲಲ್ಲು ಆಗ್ರಹಿಸಿದ್ದಾರೆ. ಘಟನೆಯ ಕುರಿತು ವಿವರ ನೀಡಿದ ಲಲ್ಲು ಅವರು, ಸದಾಫ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರು ಹಾಗೂ ‘ಸಾರೇ ಜಹಾನ್ ಸೆ ಅಚ್ಚಾ’ ಗೀತೆ ಹಾಡುತ್ತಿದ್ದರು ಎಂದು ಹೇಳಿದ್ದಾರೆ.
ತಮ್ಮ ಬ್ಯಾಗ್‌ನಲ್ಲಿ ಕಲ್ಲಿರಿಸಿಕೊಡ 10ರಿಂದ 15 ಯುವಕರು ಕಲ್ಲು ತೂರಾಟ ನಡೆಸಿದರು. ಅವರು ತಪ್ಪಿಸಿಕೊಳ್ಳಲು ಪೊಲೀಸರು ಅವಕಾಶ ನೀಡಿದರು. ಆದರೆ, ಸದಾಫ್ ಜಾಫರ್ ಅವರನ್ನು ಬಂಧಿಸಿದರು. ಇದು ಎಲ್ಲವೂ ಪ್ರಾಯೋಜಿತ. ಹಿಂಸಾಚಾರದ ಹಿಂದೆ ರಾಜ್ಯ ಸರಕಾರ ಇದೆ ಎಂದು ಅಜಯ್ ಕುಮಾರ್ ಲಲ್ಲು ಆರೋಪಿಸಿದರು.







