ಕವಿತೆಯನ್ನು ಹಾಡಲು ಜಿಎಸ್‌ಎಸ್ ಪ್ರೋತ್ಸಾಹಿಸಿದ್ದರು: ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು,ಡಿ.23: ನವ್ಯ ಸಾಹಿತ್ಯದ ಕಾಲದಲ್ಲಿ ಕವಿತೆಗಳನ್ನು ಹಾಡುವುದಕ್ಕಾಗಿ ಬರೆಯುತ್ತಾರೆ ಎಂಬ ಅಪವಾದ ಇತ್ತು. ಅಂತಹ ಸಂದರ್ಭದಲ್ಲಿ ಕವಿತೆಯನ್ನು ಹಾಡಲು ಜಿಎಸ್‌ಎಸ್ ಸೇರಿ ಅನೇಕರು ಪ್ರೋತ್ಸಾಹಿಸಿದ್ದಾರೆ ಎಂದು ಕುವೆಂಪು ಭಾಷಾಭಾರತಿ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹೇಳಿದ್ದಾರೆ.
ಸದಾ ಸಂಗೀತಧಾಮ ಟ್ರಸ್ಟ್ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನದಲ್ಲಿ ಏರ್ಪಡಿಸಿದ್ದ ನೆನಪಿನಂಗಳದಲ್ಲಿ ಜಿಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ, ಪುತಿನ ಹಾಡುವುದಕ್ಕಾಗಿ ಕವಿತೆ ಬರೆಯಲಿಲ್ಲ. ಆದರೂ ನೂರಾರು ಜನರು ಕವಿತೆಗಳನ್ನು ಹಾಡುವ ಮೂಲಕ ಅವರ ಕವಿತೆಗಳನ್ನು ಜನಪ್ರಿಯಗೊಳಿಸಿದ್ದಾರೆ ಎಂದರು.
ಗಾಯಕ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಜಿಎಸ್‌ಎಸ್ ಅವರ ಕವನ ಓದುತ್ತಾ ಹೋಗುವಾಗ ಆಳವಾದ ಭಾವನೆ ತಿಳಿಯುತ್ತದೆ. ಅವರು ಬರೆದಿರುವ ‘ಜಟಿಲ ಕಾನನದಿ ಕುಟಿಲ ಪಥದಲ್ಲಿ ಹಂಬಲಿಸಿದೆ ನಾನು’ ಎಂಬ ವಾಕ್ಯ ಶೋಷಿತ ವರ್ಗ ಮುಖ್ಯವಾಹಿನಿಗೆ ಬರುವ ಕುರಿತು ತಿಳಿಸುತ್ತದೆ. ಕಾವ್ಯ ಕವಿಯ ಸೃಷ್ಟಿಯಾದರೆ ಅದನ್ನು ಮರು ಸೃಷ್ಟಿ ಮಾಡುವುದು ಗಾಯಕ. ಜನರನ್ನು ಒಟ್ಟಿಗೆ ಸೇರಿಸುವ ಯೋಚನೆ ಬಂದಿದ್ದು ಜಿಎಸ್‌ಎಸ್ ಅವರಿಗೆ. ಅದಕ್ಕಾಗಿ ಕವನ ರಚಿಸಿ ಸುಗಮ ಸಂಗೀತಕ್ಕೆ ಮುನ್ನುಡಿ ಬರೆದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
.jpg)







