ವಿವಾಹೇತರ ಸಂಬಂಧದ ಸಂತ್ರಸ್ತ ಮಹಿಳೆ ಜೀವನಾಂಶ ಕೋರುವುದು ನ್ಯಾಯಬದ್ಧ: ಹೈಕೋರ್ಟ್

ಬೆಂಗಳೂರು, ಡಿ.23: ಮಹಿಳೆಯೊಂದಿಗೆ ವಿವಾಹೇತರ ಸಂಬಂಧ(ಲೀವಿಂಗ್ ರಿಲೇಶನ್‌ಶಿಪ್) ಹೊಂದಿ ಏಕಾಏಕಿ ಬಿಟ್ಟು ಹೋದಾಗ ಆ ಸಂತ್ರಸ್ತೆ ತನ್ನ ಜೀವನಾಂಶ ಕೋರುವುದು ನ್ಯಾಯಬದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿವಾಹೇತರ ಸಂಬಂಧ ಹೊಂದಿ ಸಂತ್ರಸ್ತೆಯಾಗಿದ್ದೇನೆ ಎಂದು ದೂರಿ ಹೈಕೋರ್ಟ್ ಮೆಟ್ಟಿಲೇರಿದ್ದ ಬೆಂಗಳೂರು ನಿವಾಸಿಯೊಬ್ಬರ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾ.ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ. ವಿವಾಹೇತರ ಸಂಬಂಧ ಹೊಂದಿದ ಮಹಿಳೆಯನ್ನು ಸಂಧಿಸುತ್ತೇನೆ ಎಂದು ಜೀವನಾಂಶ ನೀಡಬೇಕಿರುವ ಪುರುಷ ವಿಚಾರಣಾ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ. ಸಂತ್ರಸ್ತೆಯ ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಅಪ್ಪನ ಹೆಸರು ಪ್ರತಿವಾದಿಯದ್ದೇ ಆಗಿದೆ. ಇದರಿಂದ, ಅವರ ನಡುವೆ ಉತ್ತಮ ಸಂಬಂಧ ಇತ್ತು ಎಂದು ಗೊತ್ತಾಗುತ್ತದೆ. ಹೀಗಾಗಿ, ಸಂತ್ರಸ್ತೆಗೆ ಪ್ರತಿ ತಿಂಗಳೂ ಜೀವನೋಪಾಯಕ್ಕೆ 5 ಸಾವಿರ ಹಾಗೂ ಮನೆ ಬಾಡಿಗೆಗೆ 3 ಸಾವಿರ ನೀಡಬೇಕು. ಈ ಹಣವನ್ನು ಸಂತ್ರಸ್ತೆ ಯಾವಾಗ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೊ ಆ ದಿನಾಂಕದಿಂದ ಈತನಕ ಶೇ.9ರ ಬಡ್ಡಿ ದರದಲ್ಲಿ ಪಾವತಿಸಬೇಕೆಂದು ಎಂದು ಆದೇಶದಲ್ಲಿ ತಿಳಿಸಿದೆ.





