ದಟ್ಟ ಮಂಜು ಕವಿದ ವಾತಾವರಣ: ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರು, ಡಿ.23: ಕಳೆದ ಎರಡು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ದಟ್ಟ ಮಂಜುಕವಿದ ವಾತಾವರಣ ಇರುವುದರಿಂದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಂಜು ಆವರಿಸಿಕೊಂಡಿದ್ದರ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ವಿಮಾನ ನಿಲ್ದಾಣದ ಸುತ್ತಲೂ ದಟ್ಟ ಮಂಜು ಆವರಿಸಿದ್ದರಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಮಂಜು ಅತಿಯಾಗಿದ್ದರ ಪರಿಣಾಮ ವಿಮಾನವನ್ನು ಲ್ಯಾಂಡ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ 10 ಕ್ಕೂ ಅಧಿಕ ವಿಮಾನಗಳು 2 ರಿಂದ 3 ಗಂಟೆಗಳ ಕಾಲ ತಡವಾಗಿ ನಿಲ್ದಾಣ ತಲುಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೇರೆ ಕಡೆಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ವಿಮಾನಕ್ಕಾಗಿ ನಿಲ್ದಾಣದಲ್ಲಿಯೇ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿಯೂ ಎದುರಾಗಿತ್ತು. ದಟ್ಟ ಮಂಜಿನಿಂದಾಗಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್‌ನಲ್ಲಿ ಏರು ಪೇರಾಗಿದೆ. ಸಂಜೆಯವರೆಗೂ ಮೋಡ ಮುಸುಕಿದ ವಾತಾವರಣ ಇರಲಿದ್ದು, ರಾತ್ರಿಯ ನಂತರ ಆಕಾಶ ತಿಳಿಯಾಗುವ ಸಾಧ್ಯತೆಯಿದೆ.





