ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬೇಕು: ಸಚಿವ ಬಿ.ಶ್ರೀರಾಮುಲು

ಬೆಂಗಳೂರು, ಡಿ.23: ಸರಕಾರದ ಜೊತೆಗೆ ಖಾಸಗಿ ಕ್ಷೇತ್ರದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬೇಕು. ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಿ ಉದ್ಯೋಗ ನೀಡಬೇಕು. ಆಗ ಮಾತ್ರ ಕನ್ನಡ ಅನ್ನ ಕೊಡುವ ಭಾಷೆಯಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸೋಮವಾರ ನಗರದ ಕೆ.ಆರ್.ಪುರದಲ್ಲಿ ಐಟಿಐ ಎಂಪ್ಲಾಯಿಸ್ ಯೂನಿಯನ್ ಹಾಗೂ ಐಟಿಐ ಆಫೀಸರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಹೋರಾಟ ಎಂದಾಕ್ಷಣ ಗೋಕಾಕ್ ಚಳವಳಿ ನೆನಪಾಗುತ್ತದೆ. ಡಾ.ರಾಜ್‌ಕುಮಾರ್ ಸೇರಿದಂತೆ ಹಲವು ನಟರು, ಹೋರಾಟಗಾರರು ನಡೆಸಿದ ಹೋರಾಟ ಇಂದಿಗೂ ಅಜರಾಮರ. ಹೋರಾಟಗಳು ನಡೆಯಬೇಕು ನಿಜ. ಆದರೆ, ಹೋರಾಟಗಳು ಬೇರೆಯವರ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡುವ ರೀತಿಯಲ್ಲಿ ಇರಬಾರದು ಎಂದು ಅವರು ಹೇಳಿದರು.
ಹೋರಾಟಗಳಿಂದ ಬೇರೆಯವರಿಗೆ ತೊಂದರೆಗಳು ಆಗಬಾರದು. ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡುವವರು ಶಾಂತಿಯುತವಾಗಿ ಹೋರಾಟ ಮಾಡಬೇಕು. ಕನ್ನಡ ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಸರಕಾರ ಕೂಡ ಕನ್ನಡವನ್ನು ಆಡಳಿತ ಹಾಗೂ ಇನ್ನಿತರೆಡೆ ಕಡ್ಡಾಯವಾಗಿ ಅನುಷ್ಠಾನಕ್ಕೆ ಸೂಚನೆ ನೀಡಿದೆ ಎಂದು ಶ್ರೀರಾಮುಲು ತಿಳಿಸಿದರು.
ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಸೂಚನೆ ನೀಡಲಾಗಿದೆ. ಬೆಂಗಳೂರಿನ ಐಟಿಐ ಸಂಸ್ಥೆಗೆ ಕೇಂದ್ರ ಸರಕಾರದಿಂದ ಈ ಹಿಂದೆ ಕೂಡ ಅನುಕೂಲ ಮಾಡಿಕೊಟ್ಟಿದ್ದೇನೆ. ಈಗಲೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಅನುಕೂಲ ಮಾಡಿಕೊಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದರು.
ನಾನೂ ಸದ್ಯದಲ್ಲೆ ದಿಲ್ಲಿಗೆ ಹೋಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾಗುತ್ತೇನೆ. ಐಟಿಐ ಸಂಸ್ಥೆಗೆ 8 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸಲು ಮನವಿ ಮಾಡುತ್ತೇನೆ. ಐಓಟಿ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಜೊತೆಗೂ ಚರ್ಚೆ ಮಾಡುತ್ತೇನೆ. ಸ್ಪರ್ಧಾತ್ಮಕ ಯುಗದಲ್ಲಿ ಐಟಿಐ ಸಂಸ್ಥೆಯ ಬೆಳವಣಿಗೆಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಶ್ರೀರಾಮುಲು ಭರವಸೆ ನೀಡಿದರು.







