ದಾವಣಗೆರೆ: ಎನ್‌ಆರ್‌ಸಿ, ಸಿಎಎ ಹಿಂಪಡೆಯಲು ಒತ್ತಾಯಿಸಿ ಎಸ್‍ಯುಸಿಐ ಧರಣಿ

ದಾವಣಗೆರೆ, ಡಿ.23: ಸಂವಿಧಾನ ವಿರೋಧಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ, ಸಿಇಎ ಮತ್ತು ರಾಷ್ಟ್ರೀಯ ನಾಗರೀಕ ದಾಖಲಾತಿ ಹಿಂಪಡೆಯಬೇಕೆಂದು ಒತ್ತಾಯಿಸಿ ಎಸ್‍ಯುಸಿಐ ವಿದ್ಯಾರ್ಥಿ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಎನ್‍ಆರ್‍ಸಿ ಮತ್ತು ಸಿಎಎ ನಮ್ಮ ಮೂಲಭೂತ ಹಕ್ಕುಗಳಾದ ಕಲಂ 14, 21 ಮತ್ತು 25 ರ ವಿರೋಧಿಯಾಗಿದೆ. ಅಲ್ಲದೇ ಪೌರತ್ವ ಕಾಯ್ದೆ ಮೂಲಕ ಸಂವಿಧಾನವನ್ನು ತಿರುಚುವುದಾಗಿದೆ. ಬಿಜೆಪಿ ತಂದಿರುವ ಎನ್‍ಆರ್‍ಸಿಯದ್ದು ನಮ್ಮ ದೇಶವನ್ನು ಒಡೆಯುವ ಕೆಲಸವಾಗಿದೆ. ಯಾವುದೇ ಕಾನೂನು ಧರ್ಮದ ಆಧಾರದ ಮೇಲೆ ರಚನೆಯಾಗಿದ್ದರೆ ಅದು ಸಂವಿಧಾನ ವಿರುದ್ದವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ದೇಶ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ರಾಷ್ಟ್ರವಾಗಿದೆ. ಈ ದೇಶದ ಸಂಪೂರ್ಣ ಜವಾಬ್ದಾರಿ ಹೊಂದಿರುವ ತಾವುಗಳು ಭಾರತದ ಸಂವಿಧಾನವನ್ನು ಕಾಪಾಡಬೇಕು ಹಾಗೂ ಸಂವಿಧಾನ ವಿರುದ್ಧವಾದ ಸಿಎಎ ಮತ್ತು ಎನ್‍ಆರ್‍ಸಿ ರದ್ದುಗೊಳಿಸಿ ನಮ್ಮ ದೇಶದ ಏಕತೆ ಮತ್ತು ಜಾತ್ಯತೀತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಎನ್‍ಆರ್‍ಸಿ ದೇಶದ ಐಕ್ಯತೆಗೆ ಧಕ್ಕೆ ತರುವಂತಹ ಕೃತ್ಯವಾಗಿದ್ದು ಇದರಿಂದ ದೇಶದ ಪ್ರಜೆಗಳು ತೊಂದರೆಗೆ ಒಳಗಾಗಲಿದ್ದಾರೆ. ಆಧಿಕಾರ ಶಾಹಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ವಾತಾವರಣ ಸೃಷ್ಠಿಯಾಗಿದೆ. ಆದ್ದರಿಂದ ಜಾರಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಆಲಿರೆಹವಂತ, ಕೆಪಿಸಿಸಿ ಸದಸ್ಯ ಇಬ್ರಾಹಿಂದ ಖಲೀಲುಲ್ಲಾ, ಯುವ ಘಟಕದ ಉಪಾಧ್ಯಕ್ಷ ಸಾಗರ್, ಪಾಲಿಕೆ ಸದಸ್ಯ ಕವೀರ ಖಾನ್, ನೂರು ಮುಹಮ್ಮದ್, ತಾಹಿರ್, ಖಮಾರ್ ಆಲಿ, ಆಯಾಜ್ ಆಹಮದ್, ಸಾದೀಕ್, ಗಿರಿಧರ್, ಮಂಜುಳು, ವಿನಾಯಕ್, ಪ್ರವೀಣ್, ಮಯೂರು ಸೇರಿದಂತೆ ಇತರರು ಇದ್ದರು.







