ಆಸ್ಪತ್ರೆಯಲ್ಲಿ ಪೊಲೀಸ್ ‘ದೌರ್ಜನ್ಯ’ವನ್ನು ಸಮರ್ಥಿಸಿಕೊಂಡ ಮಂಗಳೂರು ವೈದ್ಯರ ಸಂಘ
‘ಆಸ್ಪತ್ರೆಯೊಳಗಿದ್ದವರು ದುಷ್ಕರ್ಮಿಗಳು’ ಎಂದ ಸಂಸ್ಥೆ

ಇಂಡಿಯನ್ ಮೆಡಿಕಲ್ ಅಸೋಸಿಯೇಶ್ ಅವರು ನೀಡಿದ ಪತ್ರಿಕಾ ಪ್ರಕಟನೆ
ಮಂಗಳೂರು, ಡಿ. 23: ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯೊಳಗೆ ನುಗ್ಗಿ ಡಿ.19ರಂದು ಪೊಲೀಸರು ನಡೆಸಿದ ‘ಕಾರ್ಯಾಚರಣೆ’ಯನ್ನು ಉಲ್ಲೇಖಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ ಖಂಡನಾ ಹೇಳಿಕೆಯ ಸುದ್ದಿಗಳಿಗೆ ಪ್ರತಿಕ್ರಿಯಿಸಿರುವ ಮಂಗಳೂರಿನ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ನಗರ ಪೊಲೀಸರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಈ ಬಗ್ಗೆ ಅಸೋಸಿಯೇಶನ್ನ ಮೆಡಿಕೋ ಲೀಗಲ್ ಸೆಲ್ನ ಅಧ್ಯಕ್ಷ ಡಾ. ಸತೀಶ್ ಭಟ್ ಪ್ರಕಟನೆ ನೀಡಿದ್ದಾರೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡಿ.19ರಂದು ಪೊಲೀಸರು ಅತಿರೇಕ ಎಸಗಿದ್ದಾರೆ ಎಂದು ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿರುವಾಗಲೇ ಪೊಲೀಸರ ಈ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮಂಗಳೂರಿನ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆಸ್ಪತ್ರೆಯೊಳಗಿದ್ದ ಜನರನ್ನೇ ‘ಬೀದಿಯಲ್ಲಿ ಅಶಾಂತಿ ಸೃಷ್ಟಿಸಿ ಆಸ್ಪತ್ರೆಯೊಳಗೆ ಬಂದು ಅವಿತುಕೊಳ್ಳುವ ದುಷ್ಕರ್ಮಿಗಳು’ ಎಂದು ಆರೋಪಿಸಿದೆ. ಜೊತೆಗೆ ಅಂದು ಆಸ್ಪತ್ರೆಯೊಳಗಿದ್ದ ಜನರನ್ನು ’ಯಾವಾಗಲೂ ಆಸ್ಪತ್ರೆಯಲ್ಲಿ ಸಮಸ್ಯೆ ಸೃಷ್ಟಿಸುವ ಸಮಾಜ ವಿರೋಧಿ ಶಕ್ತಿಗಳು’ ಎಂದು ಬಣ್ಣಿಸಿದೆ.
‘ವೈದ್ಯರಿಗೆ ಸಮಸ್ಯೆಯಾದಾಗ ನಾವು ಪೊಲೀಸರ ಸಹಾಯ ಪಡೆಯುತ್ತೇವೆ. ಹಾಗೆಯೆ ಇಲ್ಲೂ ಆಗಿದೆ. ಹಾಗಾಗಿ ಇದನ್ನು ಪೊಲೀಸರ ಅತಿರೇಕ ಎಂದು ಹೇಳಲು ಸಾಧ್ಯವೇ ಇಲ್ಲ’ ಎಂದು ಹೇಳಿರುವ ಅಸೋಸಿಯೇಶನ್, ‘ಹೈಲ್ಯಾಂಡ್’ನಲ್ಲಿ ಅಂತಹ ಯಾವುದೇ ದೌರ್ಜನ್ಯ ನಡೆದಿರುವ ಕುರಿತು ಆಸ್ಪತ್ರೆ ಮಾಲಕರು ಅಥವಾ ವೈದ್ಯರು ಯಾವುದೇ ದೂರು ನೀಡಿಲ್ಲ. ಆಸ್ಪತ್ರೆಯಲ್ಲಿ ಅಂತಹ ಯಾವುದೇ ದೌರ್ಜನ್ಯ ನಡೆದೇ ಇಲ್ಲದಿರುವಾಗ ಪೊಲೀಸರನ್ನು ಖಂಡಿಸುವುದು ಸರಿಯಲ್ಲ ಎಂದು ಹೇಳಿದೆ.
ಡಿ.19ರಂದು ಮಂಗಳೂರಿನಲ್ಲಿ ‘ಶಾಂತಿ ಕಾಪಾಡಲು ಪೊಲೀಸರು ಕರ್ಫ್ಯೂ ವಿಧಿಸಿ ಶ್ರಮಿಸಿದ್ದಾರೆ’ ಎಂದು ಹೇಳಿರುವ ಅಸೋಸಿಯೇಶನ್ ಇದಕ್ಕಾಗಿ ಅವರನ್ನು ಅಭಿನಂದಿಸಿದೆ. ಡಿ.22ರಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪೊಲೀಸರು ಆಸ್ಪತ್ರೆಯೊಳಗೆ ನುಗ್ಗುವುದನ್ನು ಖಂಡಿಸುವ ಪತ್ರಿಕಾ ಹೇಳಿಕೆ ಪ್ರಕಟಿಸಿತ್ತು.
ಅದರಲ್ಲಿ ತೀವ್ರ ನಿಗಾ ಘಟಕದ ಬಾಗಿಲು ಮುರಿದ ಕುರಿತು ಮೊದಲ ಸಾಲಿನಲ್ಲೇ ಹಾಗೂ ಒಟ್ಟು ಎರಡು ಬಾರಿ ಉಲ್ಲೇಖಿಸಲಾಗಿತ್ತು. ಇಂತಹ ಘಟನೆ ನಡೆದಿದ್ದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಎಂಬುದು ವೈರಲ್ ವೀಡಿಯೊಗಳಿಂದ ಬಹಿರಂಗವಾಗಿತ್ತು. ಅದನ್ನು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದರು.
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಮಂಗಳೂರಿನ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಅಂತಹ ಘಟನೆ ನಡೆದೇ ಇಲ್ಲ ಎಂದಿದೆ ಮಾತ್ರವಲ್ಲ, ಐಎಂಎ ಈ ಘಟನೆಯನ್ನು ತನ್ನ ಖಂಡನಾ ಹೇಳಿಕೆಯಲ್ಲಿ ಉಲ್ಲೇಖಿಸಿಯೇ ಇಲ್ಲ ಎಂದು ಹೇಳಿದೆ.

ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟನ್ಸ್ ನೀಡಿದ ಪತ್ರಿಕಾ ಪ್ರಕಟನೆ







