ಭಾರತ ‘ಎ’ ತಂಡಕ್ಕೆ ಪೃಥ್ವಿ ಶಾ ಆಯ್ಕೆ

ಹೊಸದಿಲ್ಲಿ, ಡಿ.23: ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ಪೃಥ್ವಿ ಶಾ ಟೀಮ್ ಇಂಡಿಯಾಕ್ಕೆ ವಾಪಸಾಗಲು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕಳೆದ ತಿಂಗಳು 8 ತಿಂಗಳ ನಿಷೇಧದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ಶಾ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಬರೋಡಾ ವಿರುದ್ಧ ಮುಂಬೈ ಆಡಿದ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಶಾ ಆಕರ್ಷಕ ದ್ವಿಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ಹಾಗೂ ಮಾಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಜೋಡಿಯಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ಕಾರಣ 20ರ ಹರೆಯದ ಶಾ ನ್ಯೂಝಿಲ್ಯಾಂಡ್ ಟೆಸ್ಟ್ ಸರಣಿಗೆ ಮೀಸಲು ಆರಂಭಿಕ ಆಟಗಾರನಾಗಿ ಆಯ್ಕೆಯಾಗಬಹುದು. ಶಾ ಕಳೆದ ವರ್ಷ ರಾಜ್‌ಕೋಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಶತಕ ಗಳಿಸುವ ಮೂಲಕ ಸ್ಮರಣೀಯ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಭಾರತ ಎ ತಂಡದ ಪ್ರಥಮ ದರ್ಜೆ ಪಂದ್ಯಗಳಿಗೆ ಹನುಮ ವಿಹಾರಿ ನಾಯಕನಾಗಿದ್ದು, 50 ಓವರ್‌ಗಳ ಪಂದ್ಯಕ್ಕೆ ಶುಭಮನ್ ಗಿಲ್ ನಾಯಕನಾಗಲಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯು ಫೆ.21ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದ್ದು, 2ನೇ ಟೆಸ್ಟ್ ಕ್ರೈಸ್ಟ್ ಚರ್ಚ್‌ನಲ್ಲಿ ಫೆ.29ಕ್ಕೆ ನಡೆಯಲಿದೆ. ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಆರ್.ಅಶ್ವಿನ್, ಅಜಿಂಕ್ಯ ರಹಾನೆ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಕಿವೀಸ್ ಪ್ರವಾಸಕ್ಕೆ ಮೊದಲು ಸಾಕಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಲಿದೆ.





