ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜರ್ಮನ್ ವಿದ್ಯಾರ್ಥಿಗೆ ಗಡೀಪಾರು ಶಿಕ್ಷೆ !
ಚೆನ್ನೈ: ವಿದ್ಯಾರ್ಥಿ ವಿನಿಮಯ ಯೋಜನೆಯಡಿಯಲ್ಲಿ ಮದ್ರಾಸ್ ಐಐಟಿಗೆ ಆಗಮಿಸಿದ್ದ ಜರ್ಮನಿ ವಿದ್ಯಾರ್ಥಿಯೊಬ್ಬರಿಗೆ ತಕ್ಷಣ ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ ಎಂದು ಆಪಾದಿಸಲಾಗಿದೆ. ಈ ವಿದ್ಯಾರ್ಥಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಜಾಕೋಬ್ ಲಿಡೆಂಥಲ್ ಎಂಬ ಜರ್ಮನಿ ವಿದ್ಯಾರ್ಥಿ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದು, ಇನ್ನೂ ಒಂದು ಸೆಮಿಸ್ಟರ್ ಬಾಕಿ ಇದೆ. ಸೋಮವಾರ ರಾತ್ರಿ ವಿದ್ಯಾರ್ಥಿಯನ್ನು ದೇಶದಿಂದ ಹೊರಗೆ ಕಳುಹಿಸಲಾಗಿದೆ.
ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಜಾಕೋಬ್ ಪ್ಲೆಕಾರ್ಡ್ ಹಿಡಿದಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಿದ್ಯಾರ್ಥಿಯನ್ನು ಗಡೀಪಾರು ಮಾಡಲಾಗಿದೆ.
"ನನಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಇನ್ನೂ ದೃಢಪಟ್ಟಿಲ್ಲ; ಆದರೆ ನನಗೆ ಗಡೀಪಾರು ಮಾಡುವುದಾಗಿ ಬೆದರಿಕೆ ಹಾಕಲಾಗಿದೆ" ಎಂದು ಜಾಕೋಬ್ ಹೇಳಿದ್ದಾರೆ. ಚೆಪಾಕ್ನ ವಳ್ಳುವರ್ ಕೊತ್ತಮ್ನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಜಾಕೋಬ್ ಪಾಲ್ಗೊಂಡಿದ್ದರು. ಹೆಸರು ಬಹಿರಂಗಪಡಿಸದ ಇಮಿಗ್ರೇಶನ್ ಅಧಿಕಾರಿಯೊಬ್ಬರು ತಮಗೆ ಬೆದರಿಕೆ ಹಾಕಿದ್ದಾಗಿ ಜಾಕೋಬ್ ವಿವರಿಸಿದ್ದಾರೆ.