ಪೊಲೀಸ್ ಗುಂಡಿಗೆ ಐಎಎಸ್ ಆಕಾಂಕ್ಷಿ ಯುವಕ ಬಲಿ
ನಮಾಝ್ ಮಾಡಲು ತೆರಳಿದ್ದವನಿಗೆ ಗುಂಡಿಕ್ಕಿದ ಆರಕ್ಷಕರು: ಆರೋಪ

scroll.in (ಫೈಲ್ ಚಿತ್ರ)
ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರ ಪೈಕಿ ಒಬ್ಬರಾದ 20 ವರ್ಷದ ಸುಲೈಮಾನ್ ಐಎಎಸ್ ಆಕಾಂಕ್ಷಿಯಾಗಿದ್ದರು ಹಾಗೂ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಸುಲೈಮಾನ್ ಗೂ ಪ್ರತಿಭಟನೆಗೂ ಸಂಬಂಧವೇ ಇಲ್ಲ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. "ನನ್ನ ಸೋದರ ನಮಾಝ್ ಗಾಗಿ ಹೋಗಿದ್ದ. ನಮಾಝ್ ನಂತರ ಮನೆಗೆ ವಾಪಸಾಗುತ್ತಿದ್ದ. ಕಳೆದೆರಡು ದಿನಗಳಿಂದ ಆತನಿಗೆ ಜ್ವರವಿತ್ತು. ಮನೆ ಸಮೀಪದ ಮಸೀದಿಗೆ ಹೋಗದೆ ಇನ್ನೊಂದು ಮಸೀದಿಗೆ ಹೋಗಿದ್ದ. ಅಲ್ಲಿಂದ ಹೊರ ಕಾಲಿಡುತ್ತಿದ್ದಂತೆಯೇ ಪೊಲೀಸರು ಲಾಠಿ ಚಾಜ್ ಮಾಡುತ್ತಿದ್ದರು ಹಾಗೂ ಅಶ್ರುವಾಯು ಸಿಡಿಸುತ್ತಿದ್ದರು. ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಗುಂಡಿಕ್ಕಿದ್ದಾರೆ'' ಎಂದು ಸುಲೈಮಾನ್ ಸೋದರ ಶೋಯೆಬ್ ಮಲಿಕ್ ಹೇಳುತ್ತಾರೆ.
ಸುಲೈಮಾನ್ ಹಾಗೂ ಪೊಲೀಸ್ ಗುಂಡಿಗೆ ಬಲಿಯಾದ ಮತ್ತೊಬ್ಬ ಅನೀಸ್ ನಿವಾಸಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಈಗಾಗಲೇ ಭೇಟಿ ನೀಡಿದ್ದಾರೆ.





