ಮೂವರು ಪಾಕಿಸ್ತಾನೀಯರಿಗೆ ಎರಡು ಬಾರಿ ಪೌರತ್ವ ಪ್ರಮಾಣಪತ್ರ ವಿತರಣೆ!

ರಾಜಕೋಟ್: ಗುಜರಾತ್ ರಾಜ್ಯದಲ್ಲಿ ದೀರ್ಘಾವಧಿ ವೀಸಾ ಪಡೆದು ನೆಲೆಸಿದ್ದ ಮೂವರು ಪಾಕಿಸ್ತಾನೀಯರಿಗೆ ಭಾರತೀಯ ಪೌರತ್ವದ ಪ್ರಮಾಣಪತ್ರಗಳನ್ನು ಎರಡು ದಿನಗಳ ಅವಧಿಯಲ್ಲಿ ಎರಡು ಬಾರಿ ನೀಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಈ ಮೂವರಿಗೆ ಕಚ್ಛ್ ನಲ್ಲಿ ಪ್ರಮಾಣಪತ್ರ ವಿತರಿಸಿದ ಒಂದು ದಿನ ನಂತರ ಬಿಜೆಪಿ ಸಂಸದ ಮೋಹನ್ ಕುಂಡರಿಯಾ ಈ ಪ್ರಮಾಣಪತ್ರವನ್ನು ಮೊರ್ಬಿ ಎಂಬಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ವಿತರಿಸಿದರು.
ದೇಶಾದ್ಯಂತ ಹಾಗೂ ಗುಜರಾತ್ ನ ವಿವಿಧೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಯಿದೆ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜಕೋಟ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಕುಂಡರಿಯಾ ಮೊರ್ಬಿ ಭಾರತೀಯ ಪೌರತ್ವ ಪ್ರಮಾಣಪತ್ರಗಳನ್ನು ಸ್ವರೂಪ್ ಸಿಂಹ್ ಸೋಧಾ (25) ಹಾಗೂ ಅವರ ಕಿರಿಯ ಸೋದರರಾದ ಪ್ರತಭ್ ಸಿಂಹ (23) ಹಾಗೂ ಹರಿಸಿಂಹ್ (18) ಅವರಿಗೆ ವಿತರಿಸಿದರು. ಈ ಮೂವರು ಅವರ ಕುಟುಂಬ ಸದಸ್ಯರೊಂದಿಗೆ ಭಾರತಕ್ಕೆ 2007ರಲ್ಲಿ ಬಂದಿದ್ದರು. ಕುಟುಂಬ ಕಚ್ಛ್ ಜಿಲ್ಲೆಯ ನಖತ್ರನ ತಾಲೂಕಿನ ಗೋಧಿಯರ್ ಗ್ರಾಮದಲ್ಲಿ ವಾಸವಾಗಿದೆ. ಕಳೆದ ಶುಕ್ರವಾರ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಮೊರ್ಬಿ ಎಂಬಲ್ಲಿ ಈ ಸೋದರರಿಗೆ, ಅವರ ಹಿರಿಯ ಸೋದರಿ ಮೋಹಿನಿ ಬಾಯಿ ಸಹಿತ ಏಳು ಮಂದಿ ಪಾಕಿಸ್ತಾನೀಯರಿಗೆ ಪೌರತ್ವ ಪ್ರಮಾಣಪತ್ರ ವಿತರಿಸಿದ್ದರು.





