ಮಂಗಳೂರಿನಲ್ಲಿ ಹಿಂಸಾಚಾರ : ನ್ಯಾಯಾಂಗ ತನಿಖೆಗೆ ಡಬ್ಲ್ಯೂಐಎಂ, ಎನ್‌ಡಬ್ಲ್ಯೂಎಫ್ ದ.ಕ. ಘಟಕ ಒತ್ತಾಯ

ಮಂಗಳೂರು, ಡಿ. 24: ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆಯ ಸಂದರ್ಭ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಭಾರತೀಯ ಮಹಿಳಾ ಚಳವಳಿ (ಡಬ್ಲ್ಯೂಐಎಂ) ಹಾಗೂ ರಾಷ್ಟ್ರೀಯ ಮಹಿಳಾ ಸಂಘಟನೆ(ಎನ್‌ಡಬ್ಲ್ಯೂಎಫ್)ನ ದ.ಕ. ಜಿಲ್ಲಾ ಘಟಕಗಳು ಒತ್ತಾಯಿಸಿವೆ.
ಪ್ರೆಸ್‌ಕ್ಲಬ್‌ನಲ್ಲಿ ಇಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯೂಐಎಂನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಎನ್‌ಆರ್‌ಸಿ ಹಾಗೂ ಸಿಎಎಯನ್ನು ನಾವು ವಿರೋಧಿಸುವುದಾಗಿ ಹೇಳಿದರು.
ಮಂಗಳೂರಿನಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿದ ಅವರು, ಸಕಾರಣವಿಲ್ಲದೆ ಏಕಾಏಕಿ ಗೋಲಿಬಾರ್ ನಡೆಸಿ ಹತ್ಯೆ ನಡೆಸುವುದು ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ ಎಂದರು.
7000 ಮಂದಿ ಪೊಲೀಸ್ ಠಾಣೆ ನುಗ್ಗಿ ಹತ್ಯೆ ನಡೆಸಲು ಹಾಗೂ ಠಾಣೆಯನ್ನು ಸುಡಲು ಪ್ರಯತ್ನಿಸಿದ್ದಾರೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ದಾಖಲೆಗಳನ್ನು ಒದಗಿಸಲಿ ಎಂದು ಅವರು ಹೇಳಿದರು.
ಗಾಯಗೊಂಡವರಿಗೆ ಹೊಟ್ಟೆ, ಕಣ್ಣು, ಎದೆ ಭಾಗಕ್ಕೆ ಗುಂಡುಗಳು ತಗಲಿವೆ. ಆಸ್ಪತ್ರೆಯಲ್ಲೂ ಅಶ್ರು ವಾಯು ಸಿಡಿಸಲಾಗಿದೆ. ಮುಖ್ಯಮಂತ್ರಿ ಗೋಲಿಬಾರ್ ಮಾಡಬಾರದೆಂದು ಆದೇಶ ನೀಡಿದ್ದರೂ, ಪೊಲೀಸರು ಗುಂಡು ಸಿಡಿಸಿದ್ದು ಯಾಕೆ ? ಇಂತಹ ಘಟನೆಯಿಂದ ಮಂಗಳೂರಿನ ಅಲ್ಪಸಂಖ್ಯಾತರಿಗೆ ಅಭದ್ರತೆಯ ವಾತಾವರಣ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.
ಘಟನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಭೇಟಿ ನೀಡಿ ಸಂಶೋಧನಾ ವರದಿ ನೀಡಬೇಕು. ತಮ್ಮ ಸಂಘಟನೆಯು ಈಗಾಗಲೇ ಘಟನೆಗೆ ಸಂಬಂಧಿಸಿ ವರದಿಯನ್ನು ತಯಾರಿಸಿದ್ದು, ಆಯೋಗಕ್ಕೆ ನೀಡಲು ಸಿದ್ಧವಿದೆ ಎಂದವರು ಹೇಳಿದರು.
ಕೇರಳದಿಂದ ಬಂದವರು ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ತೂರಾಟ ನಡೆಸಿದ್ದಾರೆಂಬ ಶೋಭಾಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಹಿದಾ ತಸ್ಲೀಂ, ಅಶ್ರುವಾಯು ದಾಳಿ ನಡೆದಾಗ ತಮ್ಮನ್ನು ರಕ್ಷಿಸಿಕೊಳ್ಳಲು ಅಲ್ಲಿದ್ದವರು ಮುಖಕ್ಕೆ ಬಟ್ಟೆ ಕಟ್ಟಿರಬಹುದು. ಕೇರಳದಿಂದ ಬಂದಿದ್ದರೆ ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತುಲ್ಲವೇ ? ಅವರ ಮೇಲೆ ಎಫ್‌ಐಆರ್ ದಾಖಲಾಗಬೇಕಿತ್ತಲ್ಲವೇ ಎಂದವರು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆಯವರು ಕಿಚ್ಚು ಹಚ್ಚಿ ಹೋಗಿದ್ದಾರೆಯೇ ಹೊರತು ಮೃತರ ಬಗ್ಗೆ ಮಾತನಾಡಿಲ್ಲ. ಘಟನೆಯ ಸಂದರ್ಭ ಕಲ್ಲು ತೂರಾಟ ನಡೆದಿದ್ದಲ್ಲಿ ಅದನ್ನು ನಾವು ಖಂಡಿಸುತ್ತೇವೆ. ಆದರೆ ಅಂತಹ ಸನ್ನಿವೇಶ ನಿರ್ಮಾಣ ಮಾಡಿದ್ದು ಮಾತ್ರ ಪ್ರತಿಭಟನಾ ನಿರತರ ಮೇಲಿನ ಲಾಠಿ ಚಾರ್ಜ್ ಎಂದು ಅವರು ಆರೋಪಿಸಿದರು.
ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹಾಗೂ ಕದ್ರಿ ಠಾಣೆ ಇನ್ಸ್‌ಪೆಕ್ಟರ್ ಮೇಲೆ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಅಮಾನತುಗೊಳಿಸಬೇಕು ಹಾಗೂ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ಧನ ಹಾಗೂ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು. ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ಸರಕಾರ ಭರಿಸಬೇಕು. ನಗರದ ಅಲ್ಪಸಂಖ್ಯಾತರಿಗೆ ನೈತಿಕ ಧೈರ್ಯ ತುಂಬುವ ಹಾಗೂ ರಕ್ಷಣೆ ನೀಡುವ ಬಗ್ಗೆ ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಎನ್‌ಡಬ್ಲ್ಯೂಎಫ್‌ನ ರಾಜ್ಯಾಧ್ಯಕ್ಷೆ ಝೀನತ್, ಜಿಲ್ಲಾಧ್ಯಕ್ಷೆ ರಮ್ಲತ್, ಡಬ್ಲ್ಯೂಐಎಂನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, ಮನಪಾ ಸದಸ್ಯೆ ಶಂಶಾದ್ ಅಬೂಬಕರ್ ಉಪಸ್ಥಿತರಿದ್ದರು.







