ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಖಂಡಿಸಿ ನಡು ರಸ್ತೆಯಲ್ಲೇ ಪಂಚರ್ ಅಂಗಡಿ ತೆರೆದು ವಿನೂತನ ಪ್ರತಿಭಟನೆ

ಬೆಂಗಳೂರು : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದಿತ ಹೇಳಿಕೆ ಖಂಡಿಸಿ, ನಗರದ ರಸ್ತೆಯಲ್ಲಿಯೇ ಪಂಚರ್ ಅಂಗಡಿಯ ಸಾಮಗ್ರಿಗಳನ್ನಿಟ್ಟು ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಮೌರ್ಯ ವೃತ್ತ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಯರ್ತರು ಪಾಲ್ಗೊಂಡು, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ವಿರೋಧಿಸುವವರ ಬಗ್ಗೆ ವಿವಾದಿತ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಇತ್ತೀಚಿಗೆ ಸಿಎಎ ಪರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಭಾಗಿಯಾಗಿ, ಅಕ್ಷರ ಇಲ್ಲದವರು, ಪಂಚರ್ ಅಂಗಡಿಯನ್ನಿಟ್ಟು ಕೊಂಡಿರುವವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಜನರನ್ನು ಭಾಗವನ್ನಾಗಿಸುವ ಉದ್ದೇಶದಿಂದಲೇ ಅವರು ಪ್ರಚೋದನಾಕಾರಿ ಮಾತುಗಳನ್ನಾಡಿದ್ದಾರೆ. ಈ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಅದೇ ರೀತಿ, ಸಚಿವ ಸಿ.ಟಿ.ರವಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಅವರು ಸಹ ಮತದಾರರನ್ನು ಹಾಗೂ ನಾಗರೀಕರನ್ನು ಅವಮಾನಿಸಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರು ವಿನಾಃಕಾರಣ ಪಾಕಿಸ್ತಾನದ ಹಾಗೂ ಭಯೋತ್ಪಾದಕರ ಹೆಸರನ್ನು ಪ್ರಸ್ತಾಪಿಸಿ ದೇಶದ ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಇದೇ ರೀತಿ, ಅವರ ಹೇಳಿಕೆಗಳು ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಬೆಂಗಳೂರು ಜಿಲ್ಲಾ ಅಧ್ಯಕ್ಷ ಎ.ಆನಂದ್, ಮುಖಂಡರಾದ ಎಸ್. ಮನೋಹರ್, ಯುವ ಕಾಂಗ್ರೆಸ್ ಮುಖಂಡರಾದ ವಿ.ಶೇಖರ್, ಎಲ್.ಜಯಸಿಂಹ ಸೇರಿದಂತೆ ಪ್ರಮುಖರಿದ್ದರು.








