ಮಂಗಳೂರು ಗಲಭೆಯ ಬಗ್ಗೆ ಎನ್ ಐ ಎ ತನಿಖೆ ನಡೆಸಲಿ : ಶರಣ್ ಪಂಪ್ ವೆಲ್

ಮಂಗಳೂರು: ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ನೆಪದಲ್ಲಿ ಹಿಂಸಾಚಾರ ನಡೆದಿದೆ. ಇದರ ಹಿಂದೆ ಬೇರೆ ರಾಜ್ಯದ ಭಯೋತ್ಪಾದಕರ ಕೈವಾಡ ಇದೆ ಎಂಬ ಗುಮಾನಿ ಇದೆ ಈ ಹಿನ್ನೆಲೆಯಲ್ಲಿ ಈ ತನಿಖೆಯನ್ನು ಎನ್ಐಎ ಗೆ ವಹಿಸಿಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ನಡೆದ ರೀತಿ ಮಂಗಳೂರಲ್ಲಿಯೂ ಕಲ್ಲು ತೂರಾಟದ ಪ್ರಕರಣಗಳು ನಡೆದಿದೆ. ಈ ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎನ್ನುವ ಸಂದೇಹ ಇದೆ. ಹೀಗಾಗಿ ಮಂಗಳೂರು ಗಲಭೆ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐ ಎ ಮೂಲಕ ತನಿಖೆ ನಡೆಸಲು ವಿಹಿಂಪ ಆಗ್ರಹಿಸುತ್ತದೆ. ಮಾತ್ರವಲ್ಲ, ಈ ಬಗ್ಗೆ ತನಿಖೆಗೆ ಕೇಂದ್ರ ಸರ್ಕಾರವೂ ಮುಂದಾಗಬೇಕು ಎಂದು ಶರಣ್ ಪಂಪ್ ವೆಲ್ ಆಗ್ರಹಿಸಿದರು.
ಮಂಗಳೂರಲ್ಲಿ ನಡೆದ ಗಲಭೆ ಅತ್ಯಂತ ಗಂಭೀರ ಮತ್ತು ಆತಂಕಕಾರಿ. ನಗರದಲ್ಲಿ ನಡೆದಿರುವ ಈ ಘಟನೆಯನ್ನು ವಿಹಿಂಪ ಖಂಡಿಸುತ್ತದೆ ಎಂದರು.
ಪ್ರತಿಭನಟನೆಯ ವೇಳೆ ಪ್ರತಿಭಟನಕಾರರು ಮುಖಕ್ಕೆ ಬಟ್ಟೆ ಹಾಕಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭೇಟಿ ನೀಡಿದ ವಿವಿಧ ಪಕ್ಷಗಳ ಮುಖಂಡರು ಗಾಯಗೊಂಡ ಪೊಲೀಸರನ್ನು ವಿಚಾರಿಸಲಿಲ್ಲ, ನೈತಿಕ ಸ್ಥೈರ್ಯ ವನ್ನು ತುಂಬುವ ಕೆಲಸ ಮಾಡಿಲ್ಲ ಎಂದು ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿ ಯಲ್ಲಿ ವಿಎಚ್ ಪಿ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಂಗಳೂರು ಘಟಕದ ಅಧ್ಯಕ್ಷ ಗೋಪಾಲ ಕುತ್ತಾರ್ ಮೊದಲಾದ ವರು ಉಪಸ್ಥಿತರಿದ್ದರು.
ಡಿ.25ರಿಂದ ವಿಶ್ವ ಹಿಂದೂ ಪರಿಷತ್ತಿನ ಸಭೆ
ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಘ ನಿಕೇತನದಲ್ಲಿ ಡಿ. 25ರಿಂದ 27ರವರೆಗೆ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಸಭೆ ನಡೆಯಲಿದೆ ಎಂದು ರಾಜ್ಯದ ವಿಎಚ್ ಪಿ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ 27 ರಾಷ್ಟ್ರಗಳ 350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಘ ನಿಕೇತನದಲ್ಲಿ ನಡೆಯಲಿರುವ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಬಿ.ಪುರಾಣಿಕ್ ತಿಳಿಸಿದ್ದಾರೆ.







