ಉಡುಪಿ ಬಿಷಪ್‌ರಿಂದ ಕ್ರಿಸ್ಮಸ್ ಸಂದೇಶ

ಉಡುಪಿ : ಇಡೀ ಮಾನವಕುಲ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಹಬ್ಬ ಕ್ರಿಸ್ತಜಯಂತಿ ಅಥವ ಕ್ರಿಸ್ಮಸ್. ಹಬ್ಬದ ಕೇಂದ್ರ ವ್ಯಕ್ತಿ ಯೇಸು ಕಂದ. ಮಾನವನ ಮೇಲಿನ ಪ್ರೀತಿಯಿಂದ ಸರ್ವಶಕ್ತ ದೇವರು ಹುಲುಮಾನವನಾಗಿ ಒಂದು ಪುಟ್ಟ ಶಿಶುವಾಗಿ, ದನದ ಕೊಟ್ಟಿಗೆಯಲ್ಲಿ ಜನ್ಮತಳೆದ ಮಹಾರಹಸ್ಯದ ಆಚರಣೆಯೇ ಕ್ರಿಸ್‌ಮಸ್. ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿ ದರೆಂದರೆ ತಮ್ಮ ಏಕಮಾತ್ರ ಪುತ್ರರನ್ನೇ ಈ ಲೋಕಕ್ಕೆ ಕೊಟ್ಟರು ಎನ್ನುತ್ತದೆ ಪವಿತ್ರ ಬೈಬಲ್ ಗ್ರಂಥ. ಮಾನವ ತನ್ನ ಮನುಷ್ಯತ್ವವನ್ನು ಮರೆತು ದಾನವನಾಗಲು ಹೊರಟಾಗ ಮಾನವನಿಗೆ ಮಾನವನಾಗಿ ಜೀವಿಸುವುದನ್ನು ಕಲಿಸಲು ದೇವರು ಧರೆಗಿಳಿದ ಹಬ್ಬವೇ ಕ್ರಿಸ್ಮಸ್.
ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ, ಶೋಷಣೆ, ರೋಗರುಜಿನ, ದ್ವೇಷ, ಯುದ್ಧ, ಅತ್ಯಾಚಾರ, ಮತಾಂಧತೆ, ಪರಮತ ಅಸಹಿಷ್ಣುತೆ ಇತ್ಯಾದಿಗಳನ್ನು ಕಾಣುತ್ತೇವೆ. ಇದಕ್ಕೆ ಉತ್ತರ ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಖಂಡಿತಾ ಅಲ್ಲ. ಬದಲಾಗಿ ಪ್ರೀತಿ ಮಾತ್ರ. ಇದನ್ನು ತಿಳಿಸಲೆಂದೇ ಯೇಸು ಕ್ರಿಸ್ತರು ಈ ಧರೆಯಲ್ಲಿ ಹುಟ್ಟಿದ್ದು.
ಕ್ರಿಸ್ತ ಜನನದ ಕುರಿತು ಪ್ರವಾದಿ ಯೆಶಾಯ ಮೊದಲೇ ತಿಳಿಸಿದ್ದನು. ಇಗೋ ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಆತನನ್ನು ಶಾಂತಿನೃಪನೆಂದು ಕರೆಯುವರು. ಆತನ ರಾಜ್ಯದ ಶಾಂತಿ ಹೇಗಿರುತ್ತದೆ ಎಂದರೆ ತೋಳ ಮತ್ತು ಕುರಿಮರಿ ಒಂದಾಗಿ ಬಾಳುವುವು, ಮೇಕೆ ಮತ್ತು ಚಿರತೆ ಜೊತೆಯಾಗಿ ಮಲಗುವುವು, ಕರುವು ಸಿಂಹ ಒಟ್ಟಾಗಿ ಮೊಲೆಯುಣ್ಣುವುವು, ಕರಡಿ ಮತ್ತು ಅಕಳು ಒಟ್ಟಿಗೆ ಮೇಯುವುವು, ಮೊಲೆಗೂಸು ನಾಗರ ಹುತ್ತದ ಮೇಲೆ ಆಡುವುದು. ಆದರೆ ಯಾವುದೇ ಕೇಡು ಅಥವಾ ಹಾನಿಯಾಗದು. ಅಲ್ಲಿ ಶಾಶ್ವತ ಶಾಂತಿ ನೆಲೆಸುವುದು.
ದೇವರೇ ಶಾಂತಿಯ ಮೂಲ. ಯೇಸು ಜನಿಸಿದ ದಿವಸ ದೇವರ ಶಾಂತಿ ಈ ಲೋಕದಲ್ಲಿ ಜನ್ಮತಾಳಿತು. ಅವರೇ ನಮ್ಮ ನಿಜವಾದ ಶಾಂತಿ.ತನ್ನ ಪ್ರಾಣವನ್ನೇ ಧಾರೆಯೆರೆದು ಮೃತ್ಯುಂಜಯನಾಗಿ ಸತ್ತಲ್ಲಿಂದ ಎದ್ದು ಬಂದ ಪುರುತ್ಥಾನಿ ಕ್ರಿಸ್ತ ಹೇಳುವುದಿಷ್ಟೇ: ಒಬ್ಬರನ್ನೊಬ್ಬರು ಪ್ರೀತಿಸಿರಿ ಆಗ ಮಾತ್ರ ಶಾಂತಿ ಸಾಧ್ಯ. ಶಾಂತಿಯಿದ್ದಲ್ಲಿ ಮಾತ್ರ ಬಾವೈಕ್ಯತೆ, ಸಾಮರಸ್ಯ, ಸಹಬಾಳ್ವೆ, ಸಮಾಧಾನ ಸಾಧ್ಯ. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು. ಅವರೇ ನಿಜವಾದ ದೇವರ ಮಕ್ಕಳು. ಹಾಗಾದರೆ ನಾವೂ ನೀವೂ ಶಾಂತಿಯ ಸಾಧನ, ಶಾಂತಿಯ ದೂತರಾಗೋಣವೇ? ಶಾಂತಿ, ಪ್ರೀತಿಯ ಭಾರತವನ್ನು ಕಟ್ಟೋಣವೇ?
ಸರ್ವೇಜನಾ: ಸುಖಿನೋ ಭವಂತು! ವಾಲೈಕುಮ್ ಸಲಾಮ್! ಒಬ್ಬರನ್ನೊಬ್ಬರು ಪ್ರೀತಿಸಿರಿ - ಇವೆಲ್ಲದರ ತಾತ್ಪರ್ಯ ಒಂದೇ. ಎಲ್ಲರೂ ಸುಖ, ಶಾಂತಿ,ಪ್ರೀತಿಯಿಂದ ಬಾಳಲಿ ಎಂಬುದು. ಇದೇ ಕ್ರಿಸ್ತ ಜಯಂತಿಯ ಸಂದೇಶ. ತಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳು.
ಪರಮಪೂಜ್ಯ ಡಾ.ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು







