ಬೋಯಿಂಗ್ ವಿಮಾನ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀನಾಮೆ
ಅಧ್ಯಕ್ಷ ಡೇವಿಡ್ ಕ್ಯಾಲ್ಹೌನ್ ನೂತನ ಮುಖ್ಯಾಧಿಕಾರಿ
ನ್ಯೂಯಾರ್ಕ್, ಡಿ. 24: ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ಸೋಮವಾರ ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೆನಿಸ್ ಮೂಲನ್‌ಬರ್ಗ್‌ರನ್ನು ಬದಲಿಸಿದೆ. 737 ಮ್ಯಾಕ್ಸ್ ವಿಮಾನಗಳಿಗೆ ಸಂಬಂಧಿಸಿದ ಸುದೀರ್ಘ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕಂಪೆನಿಯ ವಿಶ್ವಾಸಾರ್ಹತೆಯನ್ನು ಮರಳಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಬದಲಾವಣೆ ಅಗತ್ಯ ಎಂದು ಅದು ಹೇಳಿದೆ.
ಬೋಯಿಂಗ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಡೇವಿಡ್ ಕ್ಯಾಲ್ಹೌನ್‌ರನ್ನು ಅಧ್ಯಕ್ಷ ಮತ್ತು ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬೋಯಿಂಗ್ ನೇಮಿಸಿದೆ. ಕಂಪೆನಿಯು ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಬೇಕಾಗಿದೆ ಹಾಗೂ ವಿಮಾನಯಾನ ಕಂಪೆನಿಗಳು, ಗ್ರಾಹಕರು ಮತ್ತು ಇತರ ಎಲ್ಲ ಸಂಬಂಧಪಟ್ಟವರೊಂದಿಗಿನ ಸಂಬಂಧಗಳಿಗೆ ತೇಪೆಹಚ್ಚಬೇಕಾಗಿದೆ ಎಂದು ಕಂಪೆನಿ ತಿಳಿಸಿದೆ.
ಬೋಯಿಂಗ್‌ನ ಎರಡು ಮ್ಯಾಕ್ಸ್ 737 ಮಾದರಿಯ ವಿಮಾನಗಳು ಪತನಗೊಂಡ ಬಳಿಕ, ಈ ಮಾದರಿಯ ವಿಮಾನಗಳನ್ನು ಮಾರ್ಚ್‌ನಲ್ಲಿ ಜಗತ್ತಿನಾದ್ಯಂತ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ.
ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮ್ಯಾಕ್ಸ್ ವಿಮಾನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅತ್ಯಂತ ಮಹತ್ವದ ನಿರ್ಧಾರವನ್ನು ಬೋಯಿಂಗ್ ತೆಗೆದುಕೊಂಡ ವಾರದ ಬಳಿಕ, ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀನಾಮೆ ನೀಡಿದ್ದಾರೆ.





