ಮಲ್ಪೆ ಬೀಚ್ ಉತ್ಸವ-ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಉಡುಪಿ, ಡಿ.24: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಲ್ಪೆಅಭಿವೃದ್ಧಿ ಸಮಿತಿ, ನಿರ್ಮಿತಿ ಕೇಂದ್ರ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಡಿ. 29ರಿಂದ 31ರವರೆಗೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ‘ಮಲ್ಪೆಬೀಚ್ ಉತ್ಸವ-2019’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಿ.29ರಂದು ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬಳಿಕ ವಾಲಿಬಾಲ್ (ಪುರುಷರು), ತ್ರೋಬಾಲ್ (ಮಹಿಳೆಯರಿಗೆ), ಚಿತ್ರಕಲೆ ಸ್ಪರ್ಧೆ, ಮರಳು ಶಿಲ್ಪ, ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನ (ಸ್ಪರ್ಧೆ), ಅಂಜಲಿ ವಿಲ್ಸನ್ ಡ್ಯಾನ್ಸ್ ಟ್ರೂಪ್, ಶಿರಸಿ ಮತ್ತು ಉಡುಪಿ ಜಿಲ್ಲೆಯ ಹೆಸರಾಂತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.30 ರಂದು ಕರ್ನಾಟಕದ ವಿವಿಧ ಜಿಲ್ಲೆಯ ಕಲಾ ತಂಡಗಳಿಂದ ಜನಪದ ಜಾತ್ರೆ ಹಾಗೂ ಪುರುಷರ ಹೊನಲು ಬೆಳಕಿನ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಡಿ.31ರಂದು ಕರಾವಳಿ ಕರ್ನಾಟಕದ ಹೆಸರಾಂತ ಕಲಾವಿದರಿಂದ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಖ್ಯಾತಿಯ ಹೆಸರಾಂತ ಕಲಾವಿದರಿಂದ ಸಂಗೀತ ರಸ ಮಂಜರಿ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ನಡೆಯುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಹೆಸರಾಂತ ನೃತ್ಯ ಕಲಾವಿದರಿಂದ ನೃತ್ಯ ವೈವಿಧ್ಯಮಯ ಕಾರ್ಯಕ್ರಮ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದರಿಂದ ವರ್ಣ ವಸಂತ ಚಿತ್ರ ಪ್ರದರ್ಶನ ಕಾರ್ಯಕ್ರಮ ಹಾಗೂ ಕೇರಳದ ಹೆಸರಾಂತ ಕಲಾವಿದರಿಂದ ವಿಭಿನ್ನ ರೀತಿಯ ನೃತ್ಯ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದ ಬಳಿಕ ವಿವಿಧ ಬಗೆಯ ಸುಡುಮದ್ದು ಪ್ರದರ್ಶನದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







