‘ರೇಸ್‌ಕೋರ್ಸ್’ ಪರವಾನಿಗೆ ಅಮಾನತ್ತಿಗೆ ಸೂಚನೆ
ಬೆಂಗಳೂರು, ಡಿ. 24: ಬೆಂಗಳೂರು ಟರ್ಫ್ ಕ್ಲಬ್(ರೇಸ್‌ಕೋರ್ಸ್) ಪರವಾನಿಗೆ ಅಮಾನತಿನಲ್ಲಿ ಇಡಬೇಕು ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ವಿಧಾನ ಮಂಡಲ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ರೇಸ್‌ಕೋರ್ಸ್ ಮೇಲೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿದ ಆರೋಪವಿದೆ. ಹೀಗಾಗಿ ಸರಕಾರ ಅದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.
ಆರ್ಥಿಕ ಇಲಾಖೆ ಶೀಘ್ರವೇ(ಡಿ.26) ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟರ್ಫ್ ಕ್ಲಬ್ ಪರವಾನಿಗೆ ಅಮಾನತ್ತಿಗೆ ಶಿಫಾರಸ್ಸು ಮಾಡಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನ ಕೈಗೊಳ್ಳಲಿದ್ದಾರೆಂದು ಪಾಟೀಲ್ ಸ್ಪಷ್ಟಪಡಿಸಿದರು.
ಷರತ್ತನ್ನು ಉಲ್ಲಂಘಿಸಿದ ರೇಸ್‌ಕೋರ್ಸ್ ವಿರುದ್ಧ ಒಂದು ಕಡೆ ಕಾನೂನು ಹೋರಾಟ ಮಾಡುತ್ತಲೇ, ಮತ್ತೊಂದು ಕಡೆ ಆರ್ಥಿಕ ಇಲಾಖೆ ಅದರ ಪರವಾನಿಗೆ ನವೀಕರಿಸುತ್ತಿರುವುದು ಸಲ್ಲ. ಹೀಗಾಗಿ ಪರವಾನಿಗೆ ಅಮಾನತ್ತುಗೊಳಿಸಲು ಸೂಚಿಸಲಾಗಿದೆ ಎಂದರು.
ಮರು ತನಿಖೆ: 3 ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣವನ್ನು 1999ರಿಂದ 2014ರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅನಧಿಕೃತವಾಗಿ ಮ್ಯೂಚುಯಲ್ ಫಂಡ್‌ನಲ್ಲಿ ತೊಡಗಿಸುವ ಮೂಲಕ ಅಕ್ರಮ ನಡೆಸಿದ್ದಾರೆ.
ಹೀಗಾಗಿ ಈ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ಸಮರ್ಪಕ ತನಿಖೆ ನಡೆಸಿಲ್ಲ. ಆದುದರಿಂದ ಈ ಸಂಬಂಧ ಮರು ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಸದಸ್ಯರಾದ ಸಿ.ಎಂ.ಇಬ್ರಾಹೀಂ, ಸರವಣ, ವೇಣುಗೋಪಾಲ್, ನಾರಾಯಣಸ್ವಾಮಿ, ಮರುಗೇಶ್ ನಿರಾಣಿ, ಆರ್.ನರೇಂದ್ರ ಸೇರಿದಂತೆ ಇನ್ನಿತರರು ಸಭೆಯಲಿ ಪಾಲ್ಗೊಂಡಿದ್ದರು.







