‘ಗ್ಯಾಸ್ ಲೈನ್'ಗೆ ಹಾನಿಯಾದರೆ ಕ್ರಿಮಿನಲ್ ಕೇಸ್: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು, ಡಿ.24: ಸಿಲಿಕಾನ್ ಸಿಟಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯುಂಟು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಹೇಳಿದ್ದಾರೆ.
ಮಂಗಳವಾರ ನಗರದ ರೇಸ್‌ಕೋರ್ಸ್ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಗೇಲ್ ಗ್ಯಾಸ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ, ನಗರ ಗ್ಯಾಸ್ ವಿತರಣೆ ಕುರಿತ ಸುರಕ್ಷತಾ ಜಾಗೃತಿ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಿಗೆ ಗ್ಯಾಸ್ ಪೂರೈಕೆ ಮಾಡುವ ಯೋಜನೆ ಸಾಕಷ್ಟು ಸವಾಲಿನದು. ಈ ನಿಟ್ಟಿನಲ್ಲಿ ಗೇಲ್ ಗ್ಯಾಸ್ ಸಂಸ್ಥೆ ಉತ್ತಮವಾಗಿ ಅನುಷ್ಠಾನಗೊಳಿಸುತ್ತಿದೆ. ಆದರೆ, ಕೆಲವೆಡೆ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಕಾಮಗಾರಿಗಳಿಂದಾಗಿ ಗ್ಯಾಸ್ ಪೈಪ್‌ಗಳಿಗೆ ಹಾನಿಯಾಗುತ್ತಿದೆ ಎಂಬ ದೂರುಗಳಿವೆ. ಈ ಸಂಬಂಧ ಗೇಲ್ ಸಂಸ್ಥೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಲ್ಲಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎದು ಅವರು ಹೇಳಿದರು.
ಪೊಲೀಸ್ ಸಿಬ್ಬಂದಿಗಳಿಗಾಗಿ ನಗರದ ವಿವಿಧೆಡೆ 2 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳ ಉದ್ಘಾಟನೆ ಮಾಡಬೇಕಿದೆ. ಆ ಕಾರ್ಯಕ್ರಮದ ನಂತರ ಎಲ್ಲ ಮನೆಗಳಿಗೂ ಗೇಲ್ ಗ್ಯಾಸ್ ಸಂಪರ್ಕ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ನಿಗಾ: ಗೇಲ್ ಗ್ಯಾಸ್ ಪೈಪ್‌ಲೈನ್‌ಗಳು ಹಾನಿಗೊಳಗಾಗದಂತೆ ನೋಡಿಕೊಳ್ಳಲು ಪೊಲೀಸರು ನೆರವು ನೀಡಲಿದ್ದಾರೆ. ನಗರದಲ್ಲಿನ 108 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆ, 45 ಸಂಚಾರ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿ ಪರಿವೀಕ್ಷಣೆ ವೇಳೆ ಪೈಪ್‌ಲೈನ್‌ಗಳ ಮೇಲೂ ನಿಗಾವಹಿಸಲಾಗುವುದು. ಒಂದು ವೇಳೆ ಪೈಪ್‌ಲೈನ್‌ಗಳಿಗೆ ಹಾನಿಯಾಗಿದೆ ಎಂಬುದು ತಿಳಿದುಬಂದರೆ, ಕೂಡಲೆ ಗೇಲ್ ಸಂಸ್ಥೆಯ ಸಹಾಯವಾಣಿಗೆ ಮಾಹಿತಿ ನೀಡುವಂತೆ ಮಾಡಲಾಗುವುದು ಎಂದು ಭಾಸ್ಕರ್ ರಾವ್ ನುಡಿದರು.
ಗೇಲ್ ಸಂಸ್ಥೆ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಬ್ಲೂ.ವಿವೇಕ್ ಮಾತನಾಡಿ, ಸದ್ಯ, ಗೇಲ್ ಸಂಸ್ಥೆಯ ಸಹಾಯವಾಣಿ 11 ಸಂಖ್ಯೆಯದ್ದಾಗಿದೆ. ಅದರಿಂದ ಗ್ರಾಹಕರು ಮತ್ತು ಸಾರ್ವಜನಿಕರು ಸಂಸ್ಥೆಯಲ್ಲಿ ದೂರು ದಾಖಲಿಸಲು ಕಷ್ಟವಾಗುತ್ತಿದೆ. ಹೀಗಾಗಿ ಅದನ್ನು 4 ಸಂಖ್ಯೆಗೆ ಇಳಿಸಲಾಗುವುದು ಎಂದರು.







