ಅನಧಿಕೃತ ನಂಬರ್ ಪ್ಲೇಟ್, ಚಿಹ್ನೆ, ಹೆಸರುಗಳಿದ್ದರೆ ಕ್ರಮ: ತೆರವುಗೊಳಿಸಲು ಒಂದು ವಾರದ ಕಾಲಾವಕಾಶ
ಬೆಂಗಳೂರು, ಡಿ.24: ಒಂದು ವಾರದೊಳಗೆ ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಬರೆಸಲಾಗಿರುವ ಚಿಹ್ನೆ, ಲಾಂಛನ, ಸಂಘಸಂಸ್ಥೆಗಳ ಹೆಸರುಗಳನ್ನು ತೆರವುಗೊಳಿಸದಿದ್ದರೆ ವಾಹನದ ಮಾಲಕರು ಭಾರಿ ದಂಡ ತೆರಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರದಿಂದ ವಿಶೇಷ ತಂಡಗಳು ಈ ಕುರಿತು ಕಾರ್ಯಾಚರಣೆ ನಡೆಸಲಿವೆ. ವಾಹನ ಮಾಲಕರು ತಮ್ಮ ನೋಂದಣಿ ಫಲಕಗಳಲ್ಲಿ ಸಂಖ್ಯೆಗಳನ್ನು ಬಿಟ್ಟು ಇನ್ಯಾವುದೇ ಚಿಹ್ನೆ, ಲಾಂಛನ, ಸಂಘಸಂಸ್ಥೆಗಳ ಹೆಸರು ಇದ್ದಲ್ಲಿ ಅದನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ನಿಗದಿತ ಸಮಯದೊಳಗೆ ವಾಹನಗಳ ಅನಧಿಕೃತ ಚಿಹ್ನೆ, ಲಾಂಛನಗಳನ್ನು ತೆರವುಗೊಳಿಸದಿದ್ದಲ್ಲಿ, ಅಂತಹ ವಾಹನಗಳ ಮಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದು, ಪರಿಷ್ಕೃತ ದಂಡ 500 ರೂ.ಅನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.
ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ ರಾಜ್ಯ ಮಾನವ ಹಕ್ಕುಗಳ ಹೆಸರನ್ನು ಹೋಲುವಂತಹ ಹೆಸರುಗಳನ್ನು, ಚಿಹ್ನೆ/ಲಾಂಛನಗಳನ್ನು ಹಾಕಿಕೊಳ್ಳುವುದು, ಇತರೆ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಕೇಂದ್ರ ಮೋಟಾರು ವಾಹನಗಳ ನಿಯಮಗಳ 1989ರ ನಿಯಮ 50 ಮತ್ತು 51ರ ಉಲ್ಲಂಘನೆಯಾಗುತ್ತದೆ ಎಂದರು.
ಯಾವುದೇ ವಾಹನಕ್ಕೆ ರಾಜ್ಯ ಲಾಂಛನ ಅಳವಡಿಸಲು ಸರಕಾರದಿಂದ ಅನುಮತಿ ಪಡೆಯಬೇಕು. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 127(1)ರ ಪ್ರಕಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಸಾಮಾನ್ಯ ಅಥವಾ ವಿಶೇಷ ಆದೇಶ ನೀಡದ ಹೊರತು ಯಾವುದೇ ಸಾರಿಗೆ ವಾಹನಗಳ ಮೇಲೆ ಜಾಹೀರಾತು ಸಾಧನ ಅಳವಡಿಕೆ, ಚಿತ್ರ, ಬರವಣಿಗೆ ಪ್ರದರ್ಶಿಸುವಂತಿಲ್ಲ ಎಂದು ಮಾಹಿತಿ ನೀಡಿದರು.
ನಗರದಲ್ಲಿನ ಬಹುತೇಕ ವಾಹನ ಮಾಲಕರು ನಿಯಮಗಳನ್ನು ಉಲ್ಲಂಘಿಸಿ ನೋಂದಣಿ ಫಲಕ ಅಳವಡಿಸಿಕೊಂಡಿದ್ದಾರೆ. ಅಲ್ಲದೆ, ತಮಗೆ ಇಷ್ಟವಾಗುವಂತೆ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಬರೆಸುವುದು, ವಿವಿಧ ಮಾದರಿಯ ಚಿತ್ರಗಳನ್ನು ಪ್ರದರ್ಶಿಸುವುದು, ನೋಂದಣಿ ಫಲಕದ ಮೇಲೆ ಕೆಳಗೆ ಹಸಿರು, ಕೆಂಪು ಇತ್ಯಾದಿ ಬಣ್ಣಗಳ ಪಟ್ಟಿಯನ್ನು ಅಂಟಿಸುವುದು, ಬರೆಸುವುದು, ಇನ್ನಿತ್ಯಾದಿ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.







