ಯುಪಿಎ ಮತ್ತು ಮೋದಿ ಸರಕಾರದ ಅವಧಿಯಲ್ಲಿ ಎನ್ಪಿಆರ್: ಈ ವ್ಯತ್ಯಾಸಗಳ ಕುರಿತು ತೀವ್ರ ಕಳವಳ
ಹೊಸದಿಲ್ಲಿ: ಕೇಂದ್ರ ಸರಕಾರ ಮಂಗಳವಾರ ಜಾರಿಗೆ ತರುವುದಾಗಿ ಘೋಷಿಸಿರುವ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ ಅಥವಾ ಎನ್ ಪಿಆರ್) ಅನ್ವಯ ಜನರು ತಮ್ಮ ಹೆತ್ತವರ ಜನನ ದಿನಾಂಕ ಹಾಗೂ ಜನನ ಸ್ಥಳದ ಮಾಹಿತಿಯನ್ನು ಘೋಷಿಸಬೇಕಿದೆ. ಇಂತಹ ಒಂದು ಮಾಹಿತಿ ಎನ್ ಪಿಆರ್ ನಲ್ಲಿ ಕೇಳಿರುವುದು ಇದೇ ಮೊದಲ ಬಾರಿ. 2010ರಲ್ಲಿ ಎನ್ ಪಿಆರ್ ನಡೆದಾಗ ಈ ಮಾಹಿತಿ ಕೇಳಲಾಗಿರಲಿಲ್ಲ.
ಅಕ್ರಮ ವಲಸಿಗರನ್ನು ಗುರುತಿಸುವ ಪ್ರಕ್ರಿಯೆಯಾದ ಎನ್ ಆರ್ ಕುರಿತಂತೆ ಈಗಾಗಲೇ ಇರುವ ಸಾಕಷ್ಟು ಆತಂಕಗಳ ಹಿನ್ನೆಲೆಯಲ್ಲಿ ಎನ್ ಪಿಆರ್ ಗಾಗಿ ಹೆತ್ತವರ ಮಾಹಿತಿ ಕೇಳಲಾಗಿರುವುದರಿಂದ ಸಾಕಷ್ಟು ವಿವಾದಕ್ಕೆಡೆ ಮಾಡಿದೆ.
ಪೌರತ್ವ ತಿದ್ದುಪಡಿ ಕಾಯಿದೆಯ ಅನ್ವಯ 1987ಕ್ಕಿಂತ ನಂತರ ಹುಟ್ಟಿದವರ ತಂದೆ ತಾಯಿಯ ಪೈಕಿ ಒಬ್ಬರಾದರೂ ಭಾರತೀಯ ನಾಗರಿಕರಾಗಿರಬೇಕು. ಎನ್ಆರ್ ಸಿ ದೇಶವ್ಯಾಪಿ ಜಾರಿಯಾಗಿದ್ದೇ ಆದಲ್ಲಿ ಹೆತ್ತವರ ಜನನ ದಿನಾಂಕ ಮತ್ತು ಸ್ಥಳದ ಮಾಹಿತಿ ಬೇಕಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಸಂಸತ್ತಿನಲ್ಲಿ ಹಾಗೂ ಹೊರಗಡೆ ಹಲವು ಬಾರಿ ಉಲ್ಲೇಖಿಸಿರುವುದನ್ನು ಎನ್ ಪಿಆರ್ ಟೀಕಾಕಾರರು ಉಲ್ಲೇಖಿಸುತ್ತಿದ್ದಾರೆ.
ಕಳೆದ ಬಾರಿ ನಡೆಸಲಾದ ಎನ್ ಪಿಆರ್ ಪ್ರಕ್ರಿಯೆಯ ಸಂದರ್ಭ 15 ಮಾನದಂಡಗಳ ಆಧಾರದಲ್ಲಿ ಮಾಹಿತಿ ಸಂಗ್ರಹಿಸಲಾಗಿದ್ದರೆ ಈ ಬಾರಿ 21 ಅಂಶಗಳ ಮಾಹಿತಿ ಸಂಗ್ರಹಿಸಲಾಗುವುದು. ಈ ಹಿಂದಿನ ಎನ್ ಪಿಆರ್ ಸಂದರ್ಭ ಕೇಳಲಾಗಿಲ್ಲದ ನಿವಾಸ ಸ್ಥಳ, ಪಾಸ್ ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ಡ್ರೈವಿಂಗ್ ಲೈಸನ್ಸ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಈ ಬಾರಿ ಕೇಳಲಾಗುವುದು.
ಎನ್ ಪಿಆರ್ ಅಡಿ ಸಂಗ್ರಹಿಸಲಾಗುವ ಮಾಹಿತಿಯನ್ನು ಎನ್ಆರ್ ಸಿಗೆ ಬಳಸಲಾಗುವುದಿಲ್ಲ ಹಾಗೂ ಎನ್ಆರ್ ಸಿ ಕುರಿತು ಸದ್ಯ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮಂಗಳವಾರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದರೂ ಜನರ ಆತಂಕ ದೂರವಾಗಿಲ್ಲ.