ಸಾರ್ಕ್ ಹಿಂದುಳಿಯಲು ಭಾರತ-ಪಾಕ್ ವೈರತ್ವ ಕಾರಣ: ಬಾಂಗ್ಲಾ ಸಚಿವ

ಫೋಟೊ ಕೃಪೆ: twitter. com/AKAbdulMomen
ಢಾಕಾ (ಬಾಂಗ್ಲಾದೇಶ), ಡಿ. 25: ದಕ್ಷಿಣ ಏಶ್ಯ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) ಬೆಳೆಯದಿರುವುದಕ್ಕೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವೈರತ್ವ ಕಾರಣ ಎಂದು ಬಾಂಗ್ಲಾದೇಶದ ವಿದೇಶ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.
ಅದೇ ವೇಳೆ, ಬಿಮ್ಸ್ಟೆಕ್ ಮತ್ತು ಬಿಬಿಐಎನ್ ಮುಂತಾದ ಇತರ ಪ್ರಾದೇಶಿಕ ಸಂಘಟನೆಗಳ ಬಗ್ಗೆ ಅವರು ಭರವಸೆ ವ್ಯಕ್ತಪಡಿಸಿದರು.
ಸಾರ್ಕ್ನ ಸದಸ್ಯ ದೇಶಗಳ ನಡುವೆ ಸಮನ್ವಯ ಮತ್ತು ಸಹಕಾರದ ಕೊರತೆಗೆ ಭಾರತ ಮತ್ತು ಪಾಕಿಸ್ತಾನಗಳು ಈ ತಿಂಗಳ ಆರಂಭದಲ್ಲಿ ಪರಸ್ಪರರನ್ನು ದೂಷಿಸಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶ ವಿದೇಶ ಸಚಿವಾಲಯ ಏರ್ಪಡಿಸಿದ ‘ವಿಸಿಟ್ ನೇಪಾಳ್-ಬಾಂಗ್ಲಾದೇಶ್ ಪ್ರೋಗ್ರಾಮ್-2019’ರ ಸಮಾರೋಪ ಸಮಾರಂಭದಲ್ಲಿ ವಿದೇಶಿ ಪತ್ರಕರ್ತರ ಗುಂಪೊಂದರ ಜೊತೆ ಮಾತನಾಡಿದ ಮೊಮೆನ್, ‘‘ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವೈರತ್ವದಿಂದಾಗಿ ಸಾರ್ಕ್ನ ಬೆಳವಣಿಗೆ ಸ್ಥಗಿತವಾಗಿದೆ’’ ಎಂದು ಹೇಳಿದರು.
Next Story





