ಬಿಜೆಪಿಯವರು ಮಹಿಳೆಯರ ರಕ್ತ ಹೀರುವ ತಿಗಣೆಗಳು: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

ಮೈಸೂರು,ಡಿ.25: ಬಿಜೆಪಿಯವರು ಬಡವರ, ಮಹಿಳೆಯರ ರಕ್ತ ಹೀರುವ ತಿಗಣೆಗಳು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿರುಗೇಟು ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಬಡವರು, ದಲಿತರು, ಮಹಿಳೆಯರು, ರೈತರು ಸೇರಿದಂತೆ ಸಾಮಾನ್ಯ ಜನರ ರಕ್ತವನ್ನು ಹೀರುತ್ತಿದ್ದಾರೆ. ಜಿಎಸ್‍ಟಿ, ನೋಟ್ ಬ್ಯಾನ್, ನಿರುದ್ಯೋಗ, ಅತ್ಯಾಚಾರ ಕೊಲೆ ಸೇರಿದಂತೆ ಹಲವಾರು ರೀತಿಯಲ್ಲಿ ಜನರನ್ನು ಹಿಂಸಿಸುತ್ತಿದ್ದಾರೆ. ಅಂತಹದರಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಸಂಸದ ಪ್ರತಾಪ್ ಸಿಂಹಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಏನು ಎಂಬುದು ದೇಶದ ಜನರಿಗೆ ಗೊತ್ತು. ಆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ್ ಸಿಂಹಗೆ ಇಲ್ಲ, ಇವರ ಮನಸ್ಥಿತಿ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹರಿಹಾಯ್ದರು.
ಜನರಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿಯವರನ್ನು ಬಂಧಿಸಬೇಕು. ಮೊದಲು ಸಂಸದ ಪ್ರತಾಪ್ ಸಿಂಹನನ್ನು ತನಿಖೆಗೆ ಒಳಪಡಿಸಬೇಕು. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಸಂಸದರಾದ ಮೇಲೆ ಮೈಸೂರಿನಲ್ಲಿ ಗಲಾಟೆ ಎಬ್ಬಿಸಿ ಅಶಾಂತಿಯನ್ನು ಉಂಟು ಮಾಡಿದ್ದಾರೆ. ರಾಮನ ಹೆಸರಿನಲ್ಲಿ ರಕ್ತದೋಕುಳಿಗೆ ಕಾರಣರಾಗಿದ್ದಾರೆ. ಇವರ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದವರು ಕಾನೂನಿಗೆ ಗೌರವ ಕೊಡುವವರು. ಪ್ರತಾಪ್ ಸಿಂಹನ ರೀತಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊಲೀಸ್ ಬ್ಯಾರಿಕೇಡ್‍ಗೆ ಒದ್ದು ಹೋಗುವವರಲ್ಲ. ಪೊಲೀಸರನ್ನು ಕುರಿತು ಷಂಡರು ಎನ್ನುವವರಲ್ಲ. ಇಂತಹ ವ್ಯಕ್ತಿತ್ವವ ಇರುವ ವ್ಯಕ್ತಿ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಮತ್ತು ಎನ್‍ಆರ್‍ಸಿ ಕಾಯ್ದೆ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಟಿ ಮಾಡುತ್ತಿದ್ದಾರೆ. ಪಾಕಿಸ್ತಾನದ ಭಯೋತ್ಪಾದರಿಗಿಂತ ನಮ್ಮಲ್ಲಿರುವ ಬಿಜೆಪಿ ಭಯೋತ್ಪಾದಕರೇ ದೇಶಕ್ಕೆ ಮಾರಕ. ಹಿಟ್ಲರ್ ರೀತಿಯಲ್ಲಿ ಪ್ರಧಾನಿ ನಡೆದುಕೊಳ್ಳುತ್ತಿದ್ದಾರೆ. ಅಮಿತ್ ಶಾ ಮತ್ತು ಮೋದಿ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪೌರತ್ವ ಕಾಯ್ದೆ ಜಾರಿ ವಿರುದ್ಧ ನಡೆಯುತ್ತಿರುವ ಹೋರಾಟ ಕಂಡು ಪ್ರಧಾನಿ ಮತ್ತು ಅಮಿತ್ ಶಾ ಬೆಚ್ಚಿಬಿದ್ದಿದ್ದಾರೆ. ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿ ವಿದ್ಯಾರ್ಥಿಗಳು, ಮಹಿಳೆಯರು, ದಲಿತರು ಹಿಂದುಳಿದವರು ಅಲ್ಪಸಂಖ್ಯಾತರೂ ಬೀದಿಗಿಳಿದಿದ್ದಾರೆ. ರಾಮಲೀಲಾ ಮೈದಾನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡುವ ಪ್ರಧಾನಿ ಎನ್‍ಆರ್‍ಸಿ ಜಾರಿ ಮಾಡುವುದಿಲ್ಲ ಎನ್ನುತ್ತಾರೆ. ಅಮಿತ್ ಶಾ ಜಾರಿ ಮಾಡುತ್ತೇವೆ ಎನ್ನುತ್ತಾರೆ. ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಇವರಲ್ಲಿಯೇ ಸ್ಪಷ್ಟತೆ ಇಲ್ಲ. ದೇಶವನ್ನು ಅಪಾಯದಂಚಿಗೆ ಕೊಂಡೊಯ್ಯುತ್ತಿರುವ ಪ್ರಧಾನಿ ಮತ್ತು ಅಮಿತ್ ಶಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪೌರತ್ವ ಜಾರಿಯಾದರೆ ಏನು ತೊಂದರೆ ಎಂದು ಕೆಲವರು ಕೇಳುತ್ತಿದ್ದಾರೆ. ನಮ್ಮ ಪೂರ್ವಜರು ಸೇರಿದಂತೆ ನಮ್ಮ ಕುಟುಂಬ ಬಂದು ಬಳಗ ಸಾವಿರಾರು ವರ್ಷಗಳಿಂದ ಈ ದೇಶದಲ್ಲಿಯೇ ವಾಸವಾಗಿದೆ. ನಮ್ಮ ತಾತ, ಅಜ್ಜಿಯರು ಇಲ್ಲೇ ಮಣ್ಣಾಗಿ ಹೋಗಿದ್ದಾರೆ. ಈಗ ನನಗೆ ಪೌರತ್ವ ತೋರಿಸು ಎಂದರೆ ಯಾವ ನ್ಯಾಯ, ದೇಶದಲ್ಲಿ ಹುಟ್ಟಿ ದೇಶದಲ್ಲೇ ಸಾಯುವ ನಾನು ಭಾರತೀಯಳು ಎಂದು ತೋರಿಸಬೇಕೆ. ನಾನು ಪೌರತ್ವವನ್ನು ಸಾಬೀತು ಪಡಿಸುವುದೇ ಇಲ್ಲ. ಇವರಿಗೆ ಧಮ್ ಇದ್ದರೆ ನನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಕೊಡಗಿನಲ್ಲಿ ಪ್ರವಾಹ ಬಂದು ಸಾಕಷ್ಟು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಂದಿ ನಿರಾಶ್ರಿತರಾಗಿದ್ದಾರೆ. ಇವರಲ್ಲಿ ಪೌರತ್ವದ ದಾಖಲೆ ತೋರಿಸಿ ಎಂದರೆ ಹೇಗೆ ತೋರಿಸುತ್ತಾರೆ. ಇಲ್ಲೇ ವಾಸವಾಗಿರುವ ನಮ್ಮಲ್ಲಿ ಪೌರತ್ವ ದೃಡಪಡಿಸಿ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಮಹಿಳಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪುಷ್ಪವಲ್ಲಿ ಉಪಸ್ಥಿತರಿದ್ದರು.







