ಅಮೆರಿಕ-ಚೀನಾ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಶೀಘ್ರವೇ ಸಹಿ: ಟ್ರಂಪ್

ಫ್ಲೋರಿಡ (ಅಮೆರಿಕ), ಡಿ. 25: ಈ ತಿಂಗಳಲ್ಲಿ ಅಂಗೀಕೃತವಾದ ಅಮೆರಿಕ-ಚೀನಾ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
‘‘ಹೌದು, ಸಹಿ ಹಾಕುವ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ನಾವು ಒಟ್ಟು ಸೇರಿದಾಗ ನಾವು ಸಹಿ ಹಾಕುತ್ತೇವೆ. ನಾವು ಶೀಘ್ರದಲ್ಲೇ ಸಹಿ ಹಾಕಲಿದ್ದೇವೆ. ಯಾಕೆಂದರೆ ಬೇಗನೇ ಒಪ್ಪಂದ ಏರ್ಪಡುವುದನ್ನು ನಾವು ಬಯಸುತ್ತೇವೆ. ಒಪ್ಪಂದ ಆಗಿದೆ. ಈಗ ಅನುವಾದದ ಕೆಲಸ ನಡೆಯುತ್ತಿದೆ’’ ಎಂದು ಟ್ರಂಪ್ ಹೇಳಿದರು.
ಮೊದಲನೇ ಹಂತದ ವ್ಯಾಪಾರ ಒಪ್ಪಂದಕ್ಕೆ ಜನವರಿ ಮೊದಲ ವಾರದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ಸಹಿ ಹಾಕಲಿದ್ದಾರೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ಡಿಸೆಂಬರ್ 13ರಂದು ಹೇಳಿದ್ದರು.
Next Story





