ಪ್ರಧಾನಿಯಿಂದ 6,000 ಕೋ. ರೂ. ಅಂತರ್ಜಲ ನಿರ್ವಹಣಾ ಯೋಜನೆ ಲೋಕಾರ್ಪಣೆ

ಹೊಸದಿಲ್ಲಿ, ಡಿ. 25: ಸಮುದಾಯ ಭಾಗವಹಿಸುವಿಕೆ ಮೂಲಕ ಅಂತರ್ಜಲ ಸುಧಾರಣೆಯ ಗುರಿ ಹೊಂದಿರುವ ‘ಅಟಲ್ ಭುಜಲ್ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮ ದಿನಾಚರಣೆಯ ಬುಧವಾರ ಚಾಲನೆ ನೀಡಿದರು.
ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಮಾತನಾಡಿದರು. ಪಂಚವಾರ್ಷಿಕ ಯೋಜನೆ (2020-2021ರಿಂದ 2024-2025ರ ವರೆಗೆ) ಅವಧಿಯಲ್ಲಿ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರದ ಈ ‘ಅಟಲ್ ಭುಜಲ್ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಈ ಹಿಂದೆ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. ಸಮುದಾಯ ಭಾಗವಹಿಸುವಿಕೆಯ ಮೂಲಕ ಅಂತರ್ಜಲ ಸುಧಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಇದಕ್ಕಾಗಿ ಗುಜರಾತ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಪ್ರದೇಶವನ್ನು ಆದ್ಯತೆಯ ರಾಜ್ಯಗಳು ಎಂದು ಗುರುತಿಸಲಾಗಿದೆ. ಯೋಜನೆ ಅನುಷ್ಠಾನದಿಂದ ಈ ರಾಜ್ಯಗಳ 78 ಜಿಲ್ಲೆಗಳಲ್ಲಿರುವ 8,350 ಪಂಚಾಯತ್‌ಗಳಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಇತರ ಬಿಜೆಪಿ ನಾಯಕರು ಇಲ್ಲಿನ ‘ಸದೈವ ಅತಾಲ್’ ಸ್ಮಾರಕಕ್ಕೆ ತೆರಳಿ ವಾಜಪೇಯಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.







