ಹಾಸ್ಯೋತ್ಸವ 2019 ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು, ಡಿ.25: ವರಕವಿ ಬೇಂದ್ರಯವರು ತಮ್ಮ ಜೀವನ ಮತ್ತು ಸಾಹಿತ್ಯದಲ್ಲಿ ನವಿರಾದ ಹಾಸ್ಯ ತುಂಬಿಸಿದ್ದರು. ಅವರ ಬದುಕನ್ನು ನೋಡಿದಾಗ ನೂರಾರು ಉದಾಹರಣೆ ಕಾಣಿಸುತ್ತದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ಬುಧವಾರ ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಅಕಾಡೆಮಿ ಆ್ ಹ್ಯೂಮರ್ ಆಯೋಜಿಸಿದ್ದ ಹಾಸ್ಯೋತ್ಸವ 2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಗು ಮನಸ್ಸಿನ ಬೇಂದ್ರೆ ಸದಾ ಸಂತೋಷದಿಂದ ಇರುತ್ತಿದ್ದರು. ಅದನ್ನೇ ಎಲ್ಲರಿಗೂ ಹಂಚುತ್ತಿದ್ದರು ಎಂದು, ಬೇಂದ್ರೆಯವರು ತಮ್ಮ ಜೀವನದಲ್ಲಿ ಹಾಸ್ಯವನ್ನು ಹೇಗೆ ಬಳಸಿಕೊಳ್ಳುತ್ತಿದ್ದರು ಎನ್ನುವುದನ್ನು ಹಲವು ನಿದರ್ಶನಗಳೊಂದಿಗೆ ಕರ್ಜಗಿಯವರು ವಿವರಿಸಿದರು.
24 ವರ್ಷದಿಂದ ನಡೆಯುತ್ತಿರುವ ಸಾಹಿತ್ಯ ಆಧರಿತ ಸದಭಿರುಚಿಯ ಹಾಸ್ಯೋತ್ಸವ ಇದಾಗಿದೆ. ವ್ಯಂಗ್ಯ, ಮನಸ್ಸಿಗೆ ಘಾಸಿಯಾಗುವಂತೆ ಚುಚ್ಚು ಮಾತಿಲ್ಲದೆ ಹಾಸ್ಯ ಮಾಡುವುದು ಎಂದರೆ ನಮ್ಮನ್ನೇ ನಾವು ಹಾಸ್ಯದ ವಸ್ತುವನ್ನಾಗಿಸಿಕೊಳ್ಳುವುದು. ಇದನ್ನು ಜಗತ್ತಿನ ಹಲವು ದಿಗ್ಗಜ ಹಾಸ್ಯಕಾರರು ತೋರಿಸಿಕೊಟ್ಟಿದ್ದಾರೆ. ಇಂದು ಹಾಸ್ಯದಲ್ಲಿ ಸಂದೇಶ ಇದ್ದರೂ, ಜನ ಸಂದೇಶವನ್ನು ಸ್ಥಳದಲ್ಲೇ ಬಿಟ್ಟು ಕೇವಲ ಹಾಸ್ಯದ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ. ಮಿತ, ಸ್ಮಿತ ಹಾಗೂ ಪೂರ್ವಭಾಷಿಯಾದ ಹಾಸ್ಯ ಎಲ್ಲರಿಗೂ ಖುಷಿ ಕೊಡುತ್ತದೆ ಎಂದು ವೈ.ವಿ. ಗುಂಡೂರಾವ್ ಹೇಳಿದರು.
ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್, ಬೇಲೂರು ರಾಮಮೂರ್ತಿ, ಡಾ.ಎ.ಎಚ್. ರಾಮರಾವ್, ಡಾ.ಡಿ.ವಿ. ಗುರುಪ್ರಸಾದ್, ಬಿ.ಆರ್. ಪೊಲೀಸ್ ಪಾಟೀಲ್, ಎಚ್. ದುಂಡಿರಾಜ್, ಎನ್. ರಾಮನಾಥ್ ಮೊದಲಾದವರು ತಮ್ಮ ಹಾಸ್ಯದ ಹೊನಲನ್ನು ಹರಿಸಿರು.







