ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧ: ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಡಿ.25: ರಾಜ್ಯ ಸರಕಾರವು ಕ್ಷತ್ರಿಯರಿಗೆ ಬೇಡಿಕೆಗಳಿಗೆ ಸ್ಪಂದಿಸಲಿದ್ದು, ಕರ್ನಾಟಕ ರಾಜು ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಭರವಸೆ ನೀಡಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜು ಕ್ಷತ್ರಿಯ ಸಂಘದ ವತಿಯಿಂದ ಆಯೋಜಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷತ್ರಿಯ ಸಮುದಾಯದ ಜತೆಗೆ ನಾನು ನಿಲ್ಲುತ್ತೇನೆ. ಈ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಿಗಮದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜ.15ರ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಮನವಿ ಸಲ್ಲಿಸೋಣ ಎಂದು ಅವರು ಹೇಳಿದರು.
ಎಲ್ಲ ಸಮುದಾಯ, ಸಮಾಜಗಳ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯಿಂದ ರಾಜ್ಯಗಳು ಅಭಿವೃದ್ಧಿಯಾಗುತ್ತವೆ. ಪ್ರತಿ ರಾಜ್ಯದ ಬೆಳವಣಿಗೆಯಿಂದ ದೇಶ ಅಭಿವೃದ್ಧಿಯಾಗುತ್ತದೆ. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಗಮ ಸ್ಥಾಪನೆ ಬೇಡಿಕೆಯನ್ನು ಈಡೇರಿಸಲಿದ್ದಾರೆ ಎಂದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಒಂದು ಸಣ್ಣ ಸಮುದಾಯವೂ ಸರಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಸರಕಾರ ಎಲ್ಲರನ್ನೂ ಗುರ್ತಿಸಿ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜು ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು ಮಾತನಾಡಿ, ರಾಜ್ಯದಲ್ಲಿ 30 ಲಕ್ಷ ಜನ ರಾಜು ಕ್ಷತ್ರಿಯ ಜನಾಂಗದವರಿದ್ದೇವೆ. ನಮ್ಮ ಸಮುದಾಯದ ಅಭಿವೃದ್ಧಿಗೆ ನಿಗಮದ ಅಗತ್ಯವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದೆ ಭರವಸೆ ನೀಡಿದ್ದರು. ಈಗ ಅವರದೇ ನೇತೃತ್ವದ ಸರಕಾರವಿದೆ. ನಿಗಮ ಸ್ಥಾಪನೆ ಮಾಡಿ ಭರವಸೆಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಸಿ.ಆರ್.ರಾಮಮೋಹನ್ ರಾಜು, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
.jpg)







