ಬಂಗಾಳ ರಣಜಿ ತಂಡದಿಂದ ಅಶೋಕ್ ದಿಂಡಾ ಔಟ್
ಬೌಲಿಂಗ್ ಕೋಚ್‌ಗೆ ನಿಂದನೆ

ಕೋಲ್ಕತಾ, ಡಿ.25: ಅನುಚಿತ ವರ್ತನೆ ತೋರಿದ ಅಶೋಕ್ ದಿಂಡಾರನ್ನು ಬುಧವಾರ ಆಂಧ್ರ ವಿರುದ್ಧ ಆರಂಭವಾದ ರಣಜಿ ಟ್ರೋಫಿ ಪಂದ್ಯಕ್ಕಿಂತ ಮೊದಲು ಬಂಗಾಳ ತಂಡದಿಂದ ಕೈಬಿಡಲಾಯಿತು. 116 ಪ್ರಥಮ ದರ್ಜೆ ಪಂದ್ಯಗಳಲ್ಲಿ 420 ವಿಕೆಟ್‌ಗಳನ್ನು ಉರುಳಿಸಿರುವ ಅನುಭವಿ ಮಧ್ಯಮ ವೇಗದ ಬೌಲರ್ ದಿಂಡಾ ಮಂಗಳವಾರ ಪಂದ್ಯದ ಪ್ರಾಕ್ಟೀಸ್ ಸೆಶನ್‌ಗಿಂತ ಮೊದಲು ಬೌಲಿಂಗ್ ಕೋಚ್ ರಣದೇಬ್ ಬೋಸ್‌ಗೆ ನಿಂದಿಸಿದ್ದರು ಎನ್ನಲಾಗಿದೆ. ‘‘ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಮಂಗಳವಾರ ಸಂಜೆ ಸಭೆ ನಡೆಸಿ ಶಿಸ್ತಿನ ಚೌಕಟ್ಟಿನಲ್ಲಿ ಅಶೋಕ್‌ರನ್ನು ತಂಡದಿಂದ ಹೊರಗಿಡಲು ನಿರ್ಧರಿಸಿದೆ. ಅವರು(ದಿಂಡಾ)ರಣದೇಬ್ ಬೋಸ್‌ರನ್ನು ನಿಂದಿಸಿದ್ದರು. ಸಿಬಿಎ ಕಾರ್ಯದರ್ಶಿ ಕ್ಷಮೆ ಕೇಳುವಂತೆ ದಿಂಡಾಗೆ ತಿಳಿಸಿದ್ದರು. ಆದರೆ, ಅದಕ್ಕವರು ಒಪ್ಪಲಿಲ್ಲ. ಇದು ದುರದೃಷ್ಟಕರ ಸಂಗತಿ. ಇದು ನಡೆಯಬಾರದಿತ್ತು. ಅವರಂತಹ ಹಿರಿಯ ಆಟಗಾರರರು ಹೀಗೆ ಮಾಡಬಾರದಿತ್ತು. ಆಂಧ್ರ ವಿರುದ್ಧ ಪಂದ್ಯಕ್ಕೆ ಅವರ ಅಗತ್ಯ ನಮಗಿತ್ತು. ಅವರ ಅಲಭ್ಯತೆಯಿಂದಾಗಿ ನಮ್ಮ ಇಡೀ ಯೋಜನೆ ತಲೆಕೆಳಗಾಗಿದೆ. ನಾವು ಸಿಬಿಎ ನಿರ್ಧಾರವನ್ನು ಗೌರವಿಸುತ್ತೇವೆ’’ ಎಂದು ಬಂಗಾಳದ ಕೋಚ್ ಅರುಣ್ ಲಾಲ್ ತಿಳಿಸಿದ್ದಾರೆ.





