ಉಡುಪಿಯಲ್ಲಿ ಶೇ.93ರಷ್ಟು ಸೂರ್ಯಗ್ರಹಣ ಗೋಚರ : ಸಾವಿರಾರು ಮಂದಿಯಿಂದ ಸುರಕ್ಷಿತ ಗ್ರಹಣ ವೀಕ್ಷಣೆ
ಉಡುಪಿ, ಡಿ.26: ಪ್ರಕೃತಿಯ ವೈಚಿತ್ರಗಳಲ್ಲಿ ಒಂದಾದ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ಬೆಳಗ್ಗೆ ಉಡುಪಿಯಲ್ಲಿ ಗೋಚರಿಸಿತು. ಉಡುಪಿಯಲ್ಲಿ ಇಂದು ಗ್ರಹಣ ದರ್ಶನವಾಗಿದ್ದು ಶೇ.93ರಷ್ಟು ಭಾಗ ಮಾತ್ರ. ಭಾರತದಲ್ಲಿ ಗರಿಷ್ಠ ಶೇ.96ರಷ್ಟು ಭಾಗದ ಗ್ರಹಣ ದರ್ಶನ ಮೈಸೂರು ಸಮೀಪದ ಗುಂಡ್ಲುಪೇಟೆಯಲ್ಲಿ ಸಂಭವಿಸಿದೆ ಎಂದು ಖಭೌತ ತಜ್ಞ ಹಾಗೂ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಡಾ.ಎ.ಪಿ.ಭಟ್ ತಿಳಿಸಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಹಾಗೂ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿಎಎಸಿ) ಜಂಟಿಯಾಗಿ ಕಳೆದ ಎರಡು ತಿಂಗಳಲ್ಲಿ ಸೂರ್ಯಗ್ರಹಣದ ಬಗ್ಗೆ ರಾಜ್ಯದ ಸುಮಾರು ಒಂದು ಸಾವಿರ ಶಾಲೆಗಳಲ್ಲಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದಲ್ಲದೇ, ಡಿ.26ರ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಪಿನ್‌ಹೋಲ್ ಉಪಕರಣ ಹಾಗೂ ಕನ್ನಡಗಳನ್ನು ವಿತರಿಸಿತ್ತು.
ಇಂದು ನಗರದ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿ ಸುರಕ್ಷಿತ ಗ್ರಹಣ ವೀಕ್ಷಣೆಗೆ ಸಂಘ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಕಾಲೇಜಿನ ನೂರಾರು ಕುತೂಹಲ ಭರಿತ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಲ್ಲದೇ, ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರೂ ಸೇರಿದ್ದರು.
ಸೇರಿದ್ದ ಹೆಚ್ಚಿನ ವಿದ್ಯಾರ್ಥಿಗಳು ಗ್ರಹಣ ವೀಕ್ಷಣೆಯ ಕನ್ನಡವನ್ನು ಹೊಂದಿದ್ದರೆ, ಕಾಲೇಜಿನಲ್ಲಿರುವ ಎರಡು ಬೃಹತ್ ಅಟೋಮೇಟಿಕ್ ಎಲೆಕ್ಟ್ರಾನಿಕ್ಸ್ (8 ಇಂಚು ಮತ್ತು 4 ಇಂಚು) ಟೆಲಸ್ಕೋಪ್‌ಗಳಲ್ಲದೇ, ಎರಡು ಮ್ಯಾನುವೆಲ್ ಟೆಲಸ್ಕೋಪ್ ಗಳನ್ನು ಗ್ರಹಣ ವೀಕ್ಷಿಸಲು ಬಳಸಲಾಗಿತ್ತು. ಇಬ್ಬರು ವಿದ್ಯಾರ್ಥಿಗಳು ಸಹ ಎರಡು ಮ್ಯಾನುವೆಲ್ ಟೆಲಸ್ಕೋಪ್‌ಗಳನ್ನು ತಂದಿದ್ದರು.
ಅಲ್ಲದೇ ಬೃಹತ್ ಎಲ್‌ಸಿಡಿ ಪರದೆಯ ಮೇಲೆ ಸೂರ್ಯಗ್ರಹಣದ ಬಿಂಬವನ್ನು ಮೂಡಿಸುವ ಮೂಲಕ ನೂರಾರು ಮಂದಿ ಒಟ್ಟಿಗೆ ಗ್ರಹಣ ವೀಕ್ಷಿಸಲು ವ್ಯವಸ್ಥೆಯನ್ನೂ ಮಾಡಲಾಗಿತ್ತು. 8:04ನಿಮಿಷಕ್ಕೆ ಗ್ರಹಣ ಪ್ರಾರಂಭ ಗೊಂಡ ಕ್ಷಣದಿಂದ ಗರಿಷ್ಠ ಗ್ರಹಣವಾದ 9:24ರವರೆಗೆ ಹಾಗೂ ಮುಂದೆಯೂ ಡಾ.ಎ.ಪಿ.ಭಟ್, ಪಿಪಿಸಿ ಭೌತಶಾಸ್ತ್ರ ವಿಭಾಗದ ಅತುಲ್ ಭಟ್ ಹಾಗೂ ವಿದ್ಯಾರ್ಥಿ ದಿನೇಶ್ ಹೆಬ್ಬಾರ್ ಗ್ರಹಣದ ಬಗ್ಗೆ ಮಾಹಿತಿಗಳನ್ನು ನೀಡಿ ಜನರಿಗೆ ಗ್ರಹಣದ ಸಂಪೂರ್ಣ ಪರಿಚಯ ನೀಡಿದರು.
ಬೆಂಗಳೂರಿನಿಂದ ಇಸ್ರೋದ ವಿಜ್ಞಾನಿ ನಿವೇದಿತ ಬಿ.ಕೆ ಅವರೊಂದಿಗೆ ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಪಿ.ಜೆ.ಭಟ್ ಅವರು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಸ್ರೋದ ಸಾಧನೆ ಹಾಗೂ ಗ್ರಹಣದ ಕುರಿತು ಹಲವು ವಿಷಯಗಳನ್ನು ನೆರೆದವರೊಂದಿಗೆ ಹಂಚಿಕೊಂಡರು. ಪಿಪಿಸಿಯ ಪ್ರಾಂಶುಪಾಲ ರಾದ ಡಾ.ರಾಘವೇಂದ್ರ ಎ. ಈ ವೇಳೆ ಉಪಸ್ಥಿತರಿದ್ದರು.
ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಬೆಳಗಿನ ವೇಳೆ ಮೋಡ ಕವಿದ ವಾತಾವರಣವಿದ್ದಿದ್ದರೆ, ಇಂದು ಮೋಡಗಳೇ ಇಲ್ಲದ ಶುಭ್ರ ಆಕಾಶವಿದ್ದು, ಗ್ರಹಣದ ವೀಕ್ಷಣೆ ಆಸಕ್ತರಿಗೆ ಸ್ಮರಣೀಯವಾಗಿಸಿತು. ಬೆಳಗ್ಗೆ 9ಗಂಟೆಯ ಬಳಿಕ ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಸಂಜೆ ಸೂರ್ಯ ಮುಳುಗಿದ ಬಳಿಕ ವಾತಾವರಣದ ಅನುಭವವಾಯಿತು.
ಜಿಲ್ಲೆಯಾದ್ಯಂತ ಹೆಚ್ಚಿನ ಶಾಲಾ-ಕಾಲೇಜುಗಳಲ್ಲೂ ಇಂದು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಮಕ್ಕಳು ಹಾಗೂ ಅಧ್ಯಾಪಕರು ಗ್ರಹಣ ವೀಕ್ಷಣೆ ಮಾಡಿರುವ ಬಗ್ಗೆ ವರದಿಗಳು ಬಂದಿವೆ.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ಗ್ರಹಣದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವುದ ರೊಂದಿಗೆ, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನಲ್ಲದೇ, ಇಸ್ರೋದ ಈವರೆಗಿನ ಸಾಧನೆಗಳು, ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡುವ ವಸ್ತುಪ್ರದೇಶವನ್ನು ಆಯೋಜಿಸಲಾಗಿತ್ತು. ಅಲ್ಲದೇ ಪಿ.ಜೆ.ಭಟ್ ಅವರು ಇಸ್ರೋ ನಡೆದು ಬಂದ ದಾರಿಯ ಬಗ್ಗೆ ಪ್ರಾತ್ಯಕ್ಷಿಕೆ ಯೊಂದಿಗೆ ವಿಶೇಷ ಉಪನ್ಯಾಸವನ್ನೂ ನೀಡಿದರು.
ಮುಂದಿನ ಸೂರ್ಯಗ್ರಹಣ ವೀಕ್ಷಣೆ 2064ಕ್ಕೆ
ಮುಂದಿನ ಸೂರ್ಯಗ್ರಹಣ ವೀಕ್ಷಣೆ 2064ಕ್ಕೆ ಇಂದು ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದವರಿಗೆ ಮುಂದಿನ ಸೂರ್ಯಗ್ರಹಣದ ವೀಕ್ಷಣೆಗೆ ಇನ್ನು 40 ವರ್ಷ ಕಾಯಬೇಕಾಗಿದೆ. ಈ ಬಾರಿ ದಕ್ಷಿಣ ಭಾರತೀಯರಿಗೆ ಹೆಚ್ಚು ಸ್ಪಷ್ಟವಾಗಿ ಬಲು ಅಪರೂಪದ ಕಂಕಣ ಸೂರ್ಯಗ್ರಹಣ ಕಾಣಿಸಿದೆ. ಈ ಹಿಂದೆ 1980ರಲ್ಲಿ ನಮಗೆ ಕಂಕಣ ಸೂರ್ಯ ಗ್ರಹಣ ನೋಡುವ ಭಾಗ್ಯ ಲಭಿಸಿತ್ತು. ಇನ್ನು ಮುಂದೆ ದಕ್ಷಿಣ ಭಾರತೀಯರಿಗೆ ಖಗ್ರಾಸ ಸೂರ್ಯಗ್ರಹಣ ಕಾಣಲು ಸಿಗುವುದು 2064ರ ಫೆ.17ಕ್ಕೆ. ಅಂದರೆ 40 ವರ್ಷಗಳ ನಂತರ.
ವರ್ಷದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸೇರಿ ಸರಿ ಸುಮಾರು 4ರಿಂದ 7 ಗ್ರಹಣಗಳು ಸಂಭವಿಸುತ್ತವೆ. 2019ರಲ್ಲಿ 5 ಗ್ರಹಣಗಳು ಸಂಭವಿಸಿದ್ದರೂ ಇದರಲ್ಲಿ ಭಾರತಕ್ಕೆ ನೋಡಲು ಸಿಕ್ಕಿದ್ದು ಎರಡು ಮಾತ್ರ. ಜುಲೈ 16 ರಂದು ಖಂಡಗ್ರಾಸ ಚಂದ್ರ ಗ್ರಹಣ ಹಾಗೂ ಡಿ.26ರ ಕಂಕಣ ಸೂರ್ಯಗ್ರಹಣ ಮಾತ್ರ.
ಜನವರಿ 6ರ ಪಾರ್ಶ್ವ ಸೂರ್ಯಗ್ರಹಣ, ಜ.21ರ ಖಗ್ರಾಸ ಚಂದ್ರ ಗ್ರಹಣ, ಜೂನ್ 2ರ ಖಗ್ರಾಸ ಸೂರ್ಯಗ್ರಹಣ ಭಾರತದಲ್ಲಿ ಕಾಣಲು ಸಿಕ್ಕಿಲ್ಲ. 2020ರಿಂದ 2064ರವರೆಗೆ 6 ಪಾರ್ಶ್ವ ಸೂರ್ಯಗ್ರಹಣ ಭಾರತಕ್ಕಿದ್ದರೂ ಖಗ್ರಾಸ ಸೂರ್ಯಗ್ರಹಣ 2064ಕ್ಕೆ ಮಾತ್ರ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ವರ್ಷದ ಕಂಕಣ ಸೂರ್ಯಗ್ರಹಣ ದಕ್ಷಿಣ ಭಾರತದ ವಿಜ್ಞಾನಿಗಳಿಗೆ ಹಾಗೂ ಖಗೋಳ ಆಸಕ್ತರಿಗೆ ದಕ್ಕಿದ ವಿಶೇಷ ಅವಕಾಶವಾಗಿದೆ.
ಸೂರ್ಯಗ್ರಹಣ ಎಂದರೆ....
ಸೂರ್ಯ, ಚಂದ್ರ ಮತ್ತು ಭೂಮಿ ಸರಳ ರೇಖೆಯಲ್ಲಿ ಬಂದಾಗ, ಸೂರ್ಯನ ಬೆಳಕನ್ನು ಚಂದ್ರ ತಡೆದು ಕತ್ತಲೆಯ ಅನುಭವ ವಾಗುತ್ತದೆ. ಚಂದ್ರನ ಪಥ ಭೂಮಿಯ ಸುತ್ತ ದೀರ್ಘ ವೃತ್ತಾಕಾರವಾಗಿರುವುದರಿಂದ ಗ್ರಹಣ ವಾಗುವಾಗ ಚಂದ್ರ ಭೂಮಿಯಿಂದ ದೂರದ ಎಪೊಜಿಯಲ್ಲಿದ್ದಲ್ಲಿ ಸೂರ್ಯನನ್ನು ಸಂಪೂರ್ಣ ಮರೆಮಾಚಲಾಗದೇ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಅದೇ ಸಮೀಪದ ಪೆರಿಜಿಯಲ್ಲಿ ಚಂದ್ರನಿದ್ದರೆ ಸೂರ್ಯ ಕಾಣಿಸದೇ ಖಗ್ರಾಸ ಸೂರ್ಯಗ್ರಹಣ, ಡೈಮಂಡ್ ರಿಂಗ್‌ಗಳನ್ನು ಕಾಣಬುದು ಎಂದು ಡಾ.ಭಟ್ ವಿವರಿಸಿದರು.