ಬೆಂಗಳೂರಿಗರಿಗೆ ನಿರಾಸೆ ಮೂಡಿಸಿದ 'ಸೂರ್ಯಗ್ರಹಣ'
ಗ್ರಹಣ ವೀಕ್ಷಿಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು, ಡಿ.26: ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಕಾತುರರಾಗಿದ್ದ ಸಿಲಿಕಾನ್ ಸಿಟಿಯ ಮಂದಿಗೆ ನಿರಾಸೆಯಾಗಿದ್ದು, ನಗರದಲ್ಲಿ ಮೋಡಕವಿದ ವಾತಾವರಣದಿಂದಾಗಿ ಗ್ರಹಣ ಸರಿಯಾಗಿ ಗೋಚರವಾಗಿಲ್ಲ.
ನಗರದ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಗ್ರಹಣ ವೀಕ್ಷಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಸೌರ ಕನ್ನಡಕಗಳನ್ನು ವಿತರಿಸಲಾಗಿತ್ತು. ಆದರೆ, ಮೋಡಗಳ ಆಟದಿಂದಾಗಿ ಸೂರ್ಯನ ದರ್ಶನ ಆಗದೆ ಗ್ರಹಣದ ಭಾಗ್ಯ ನಮಗೆ ಸಿಕ್ಕಲಿಲ್ಲವೆಂದು ಹಲವರು ಅಭಿಪ್ರಾಯಿಸಿದರು.
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಗರದ ನೆಹರು ತಾರಾಲಯದಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಿಸುವ ಮೂಲಕ ನೆರೆದಿದ್ದವರಿಗೆ ಆಸಕ್ತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು, ಕಂಕಣ ಸೂರ್ಯ ಗ್ರಹಣ ವೀಕ್ಷಿಸಲು ನೆಹರು ತಾರಾಲಯ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ನನಗೂ ಗ್ರಹಣ ವೀಕ್ಷಣೆ ಮಾಡಬೇಕೆಂಬ ಕುತೂಹಲ ಇತ್ತು. ಹೀಗಾಗಿ ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿ ಸಾಕಷ್ಟು ಮಂದಿ ನೆರೆದಿರುವುದನ್ನು ನೋಡಿ ಸಂತಸವಾಯಿತು ಎಂದರು.
ಉತ್ತರ ಕರ್ನಾಟಕ, ಕೊಯಮತ್ತೂರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸೂರ್ಯ ಗ್ರಹಣ ಚೆನ್ನಾಗಿ ಗೋಚರವಾಗಿದೆ. ಆದರೆ, ಬೆಂಗಳೂರಿನಲ್ಲಿ ಮೋಡ ಕವಿದಿರುವುದರಿಂದ ಗ್ರಹಣ ಸರಿಯಾಗಿ ಕಾಣಲಿಲ್ಲವೆಂದು ಅವರು ಹೇಳಿದರು.
ಬೆಂಗಳೂರು ಸೆಂಟ್ರಲ್ ಡಿಸಿಪಿ ಚೇತನ್ ಸಿಂಗ್ ರಾಥೋಡ್ ನೆಹರು ತಾರಾಲಯಕ್ಕೆ ಗ್ರಹಣ ವೀಕ್ಷಣೆಗಾಗಿ ಆಗಮಿಸಿ, ನನ್ನ ಮಗ ಪ್ರಣವ್ ಬೆಳಗ್ಗೆಯಿಂದ ಗ್ರಹಣ ವೀಕ್ಷಣೆ ಮಾಡಬೇಕು ಅಂತ ಹಠ ಮಾಡುತ್ತಿದ್ದ. ಅವನಿಗೆ ಸೂರ್ಯ ಗ್ರಹಣ ತೋರಿಸಲು ಇಲ್ಲಿಗೆ ಕರೆದುಕೊಂಡು ಬಂದೆ. ಮೋಡ ಕವಿದಿದ್ದರಿಂದ ಸೂರ್ಯ ಕಾಣಿಸಲಿಲ್ಲವೆಂದು ನಿರಾಸೆ ವ್ಯಕ್ತಪಡಿಸಿದರು.







