ಸಿಎಎ-ಎನ್‌ಆರ್‌ಸಿ ವಿರೋಧಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ
"ಪೌರತ್ವ ಸಾಬೀತುಪಡಿಸಿ ಎಂದು ಹೇಳಲು ಯಾವ ದೊಣ್ಣೆ ನಾಯಕನಿಗೂ ಹಕ್ಕಿಲ್ಲ"

ಮೈಸೂರು,ಡಿ.26: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದು, ಇಂದು ಬೃಹತ್ ಶಾಂತಿಯುತ ಪ್ರತಿಭಟನೆ ನಡೆಯಿತು.
ಗುರುವಾರ ನಗರದ ಪುರಭವನದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯನ್ನು ಒಕ್ಕೊರಳಿನಿಂದ ವಿರೋಧಿಸಿದರು.
ನಾವೆಲ್ಲರೂ ಭಾರತೀಯರು, ಭಾರತಾಂಬೆಯ ಮಕ್ಕಳು, ಈ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಯಾವ ದಾಖಲೆಯನ್ನೂ ತೋರಿಸುವುದಿಲ್ಲ, ಈ ಕಾಯ್ದೆಯನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕೇಂದ್ರ ಸರ್ಕಾರಕ್ಕೆ ಪ್ರಗತಿಪರ ಚಿಂತಕರು, ಸಾಹಿತಿಗಳು, ಮೌಲವಿಗಳು, ಪತ್ರಕರ್ತರು ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಹಿರಿಯ ಪತ್ರಕರ್ತ ಟಿ.ಗುರುರಾಜ್ ಮಾತನಾಡಿ, ಜನಸ್ತೋಮ ಕಂಡು ನಮ್ಮ ನಡುವೆ ಇರುವ ಕೇಂದ್ರ ಗುಪ್ತಚರ ಪೊಲೀಸರು ಅರ್ಥಮಾಡಿಕೊಳ್ಳಬೇಕಿದೆ. ಭಾರೀ ಜನಸ್ತೋಮದ ನಡುವೆ ನಡೆಯುತ್ತಿರುವ ಈ ಹೋರಾಟ ಯಾವ ಧರ್ಮದ ಪರವೂ ಅಲ್ಲ, ವಿರುದ್ಧವೂ ಅಲ್ಲ, ಮನುಷ್ಯತ್ವದ ಪರವಾದ, ಸಂವಿಧಾನದ ಪರವಾದ ಹೋರಾಟ, ಸಮಾನತೆ ಭ್ರಾತೃತ್ವದ ಹೋರಾಟ, ನೊಂದವರ ಶೋಷಿತರ ಪರವಾದ ಹೋರಾಟ, ವಿವಿಧತೆಯಲ್ಲಿ ಏಕತೆ ಸಾರಿ ಬಲಿಷ್ಠವಾಗಿ ಬೆಳೆದು ನಿಂತಿರುವ ಭಾರತದ ಹೋರಾಟ ಎಂದು ಹೇಳಿದರು. ಸಾವಿರಾರೂ ವರ್ಷಗಳಿಂದ ನೆಲೆಸಿ ನಮ್ಮ ಅಣ್ಣ ತಮ್ಮಂದಿರಂತೆ ಬುದುಕುತ್ತಿರುವ ಈ ನಾಡಿನ ಮುಸ್ಲಿಮರೆಲ್ಲರೂ ಭಾರತಾಂಭೆಯ ಮಕ್ಕಳು. ಈ ಹೋರಾಟಕ್ಕೆ ಧರ್ಮದ ಬಣ್ಣ ಹಚ್ಚುವ ಕೆಲಸ ಮಾಡಬೇಡಿ. ನಮ್ಮ ಪೌರತ್ವವನ್ನು ಸಾಬೀತುಪಡಿಸಿ ಎಂದು ಹೇಳಲು ಯಾವ ದೊಣ್ಣೆ ನಾಯಕನಿಗೂ ಹಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ನಮ್ಮ ತಾತ, ಅಜ್ಜಿ ಈ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ನಾವೂ ಒಂದು ದಿನ ಮಣ್ಣಾಗಿ ಹೋಗಲಿದ್ದೇವೆ. ಒಂದು ಧರ್ಮದ ಪರವಾದ ಭಾರತ ಮಾಡುತ್ತೇವೆ ಎಂಬ ಮನಸ್ಸಿದ್ದರೆ ಅದು ನಿಮ್ಮ ಹುಂಬತನ. ಯಾವ ಕಾರಣಕ್ಕೂ ಭಾರತವನ್ನು ಒಂದು ಧರ್ಮದ ಪರ ಮಾಡಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ವಿಶ್ವದಲ್ಲಿ ಧರ್ಮಗಳ ಆಧಾರದಲ್ಲಿ ನಡೆಯುತ್ತಿರುವ ಯಾವ ದೇಶವೂ ನೆಮ್ಮದಿಯಾಗಿ ಇಲ್ಲ. ಇಸ್ಲಾಮ್ ಧರ್ಮದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಪಾಕಿಸ್ತಾನ ತನ್ನೊಳಗೆಯೇ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಭೌದ್ಧ ಧರ್ಮದ ಹೆಸರಿನಲ್ಲಿರುವ ಮ್ಯಾನ್ಮಾರ್, ಶ್ರೀಲಂಕಾ ಕೂಡ ನೆಮ್ಮದಿಯಾಗಿಲ್ಲ ಎಂದು ಎಚ್ಚರಿಸಿದರು.
ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಮೋದಿ ಮತ್ತು ಶಾ ಅವರಿಗೆ ಜನ ಬುದ್ದಿ ಕಲಿಸಬೇಕಿದೆ. ಸಿಎಎ ಮತ್ತು ಎನ್‍ಆರ್‍ಸಿ ತೊಲಗಬೇಕು ಎಂದು ಹೋರಾಟ ಮಾಡಬೇಕಿಲ್ಲ. ಸಂವಿಧಾನದ ಉಳಿವಿಗಾಗಿ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಹಿರಿಯ ಚಿಂತಕ ಮುನಾವರ್ ಪಾಷ, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಪತ್ರಕರ್ತರ ದೀಪಕ್, ಮುಸ್ಲಿಮ್ ಮುಖಂಡ ಮೌಲಾನ ನಸೀಮ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಕ್ಕಳು, ವೃದ್ಧರು, ವಕೀಲರು, ವೈದ್ಯರು, ಕೂಲಿಕಾರ್ಮಿಕರು, ಗೃಹಿಣಿಯರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಿಶೇಷವಾಗಿ ಅಂಗವಿಕಲರು ಸೇರಿದಂತೆ ಎಲ್ಲಾ ವರ್ಗಗಳ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೈಸೂರು ಯುನೈಟೆಡ್ ಮುಸ್ಲಿಮ್ ವೆಲ್ಫೇರ್ ಟ್ರಸ್ಟ್ ನ ಸಂಘಟಕರು ಪ್ರತಿಬಾರಿಯೂ ಶಾಂತಿಯಿಂದ ಪ್ರತಿಭಟಿಸುವಂತೆ ಎಚ್ಚರಿಸುತ್ತಿದ್ದರು. ಸುಮಾರು 2 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಜನರನ್ನು ನಿಯಂತ್ರಿಸುತ್ತಿದ್ದರು.
ಮೊಳಗಿದ ರಾಷ್ಟ್ರಗೀತೆ: ಪ್ರತಿಭಟನೆ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು. ನಂತರ 'ಸಾರೇ ಜಹಾಂಸೆ ಅಚ್ಚ' ಗೀತೆಯನ್ನು ಹಾಡಿದರು.
ರಾರಾಜಿಸಿದ ರಾಷ್ಟ್ರಧ್ವಜ: ದೊಡ್ಡ ಮಟ್ಟದಲ್ಲಿ ಸೇರಿದ್ದ ಪ್ರತಿಭಟನಾಕಾರರು ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು. ಆವರಣದಲೆಲ್ಲಾ ರಾಷ್ಟ್ರಧ್ವಜಗಳು ರಾರಾಜಿಸಿದವು. ನಾವೆಲ್ಲರೂ ಭಾರತೀಯರು, ಸಿಎಎ ಮತ್ತು ಎನ್‍ಆರ್‍ಸಿ ಬ್ಯಾನ್ ಮಾಡಿ ಎಂಬ ಬೋರ್ಡ್‍ಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
30 ಸಾವಿರಕ್ಕೂ ಹೆಚ್ಚು ಜನರ ಆಗಮನ: ಪುರಭವನದ ಆವರಣದ ಪಕ್ಕದ ಗಾಂಧಿ ವೃತ್ತ, ಕೋಟೆ ಅರಮನೆ ಆಂಜನೇಯ ದೇವಸ್ಥಾನದ ಆವರಣ, ದೊಡ್ಡಗಡಿಯಾರ ಮತ್ತು ಸಿಟಿ ಬಸ್ ನಿಲ್ದಾಣದವರೆಗೂ ಜನಜಂಗುಳಿ ಇತ್ತು. ಅಶೋಕ ರಸ್ತೆಯ ಮೂಲಕ ತಂಡೋಪತಂಡವಾಗಿ ಪ್ರತಿಭಟನಾಕಾರರು ಪುರಭವನದ ಆವರಣಕ್ಕೆ ಆಗಮಿಸಿದರು. ಅಂಬೇಡ್ಕರ್ ಭಾವಚಿತ್ರ, ಸಂವಿಧಾನದ ಚಿತ್ರ, ರಾಷ್ಟ್ರಧ್ವಜಗಳನ್ನು ಹಿಡಿದು ಕೇಂದ್ರ ಸರ್ಕಾರ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪೊಲೀಸರ ಬಿಗಿ ಬಂದೋಬಸ್ತ್: ಪುರಭವನದ ಆವರಣದೊಳಗೆ ಆಗಮಿಸುವ ಎಲ್ಲಾ ಪ್ರತಿಭಟನಾಕಾರರನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿತ್ತು. ಆವರಣದ ನಾಲ್ಕು ಕಡೆಗಳಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಜೊತೆಗೆ ಪುರಭವನದ ಸುತ್ತ ಬ್ಯಾರಿಕೇಡ್‍ಗಳನ್ನು ಹಾಕಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಗಮನ ಸೆಳೆದ ಬಾಲಕಿ: ಪ್ರತಿಭಟೆನೆಯ ಕಾವು ಒಂದು ಕಡೆಯಾದರೆ ವೇದಿಕೆಯಲ್ಲಿ ಆಸೀನರಾಗಿದ್ದ ಧರ್ಮಗುರುಗಳು, ಮೌಲವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳ ನಡುವೆ ಪುಟ್ಟ ಬಾಲಕಿಯೋರ್ವಳು ರಾಷ್ಟ್ರ ಧ್ವಜವನ್ನು ಕೈಯಲ್ಲಿ ಹಿಡಿದು ಎಲ್ಲರ ಗಮನ ಸೆಳೆದಳು.
ಇಂಟರ್ ನೆಟ್ ಸ್ಥಗಿತ: ಪ್ರತಿಭಟನೆಯ ಆವರಣ ಸೇರಿದಂತೆ ಸುತ್ತಮುತ್ತ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿತ್ತು. ಫೋನ್ ಕರೆಗಳು ಮಾತ್ರ ಸಿಗುತಿತ್ತು.
ವೇದಿಕೆಗೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾಡಳಿತ: ಪೌರತ್ವ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಾಕಾರರ ಮನವಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ಪುರಭವನದ ವೇದಿಕೆಗೆ ಆಗಮಿಸಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಯುನೈಟೆಡ್ ಮುಸ್ಲಿಮ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಮುಫ್ತಿ ಸೈಯದ್ ತಾಜುದ್ದೀನ್, ಕಾರ್ಯದರ್ಶಿ ಡಾ.ಶಕೀಬುರ್ರಹಮಾನ್, ಖಜಾಂಚಿ ಕಲೀಲುರ್ರಹಮಾನ್, ಡಾ.ಮಸೂದ್, ಮುನಾವರ್ ಪಾಷ, ಹಫೀಜ್ ಮುಹಮದ್ ಮಕ್ಬೂಲ್ ಅಹಮದ್, ಮುಹಮದ್ ನಸೀಮ್, ಮುಹಮದ್ ಜಕುಲ್ಲಾ, ಸೈಯದ್ ಶವಾಲುಲ್ಲಾ, ಅಯೂಬ್ ಅನ್ಸಾರಿ, ಹರ್ಷದ್ ಅಹಮದ್, ಜಬಿ ಉಲ್ಲಾಖಾನ್, ಮುಹಮದ್ ಜಫ್ರುಲ್ಲಾ, ನೂರ್ ಇಬ್ರಾಹಿಮ್, ಡಾ.ಹಸೀಬ್ ಮುಂತಾಜಾರ್, ಡಾ.ಅಬೀಬ್ ಸತ್ತಾರ್, ಡಾ.ಇಫ್ತಿಕಾರ್ ಅಹಮದ್, ಸೈಯದ್ ಮುಹಮದ್ ಕಮ್ರಾನ್, ಡ್ಯಾನಿಶ್, ಮುಹಮದ್ ಉಸ್ಮಾನ್ ಶರೀಫ್, ಅಬ್ದುಲ್ ಅಜೀಜ್ ಚಾಂದ್ ಸೇರಿದಂತೆ ಮೈಸೂರಿನ ಮುಸ್ಲಿಂ ಗುರುಗಳು, ಮೌಲವಿಗಳು, ಭಾಗವಹಿಸಿದ್ದರು.
ಪ್ರಗತಿಪರ ಚಿಂತಕರಾದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಹಿರಿಯ ಗಾಂಧಿವಾದಿ ಪ.ಮಲ್ಲೇಶ್, ಶಬ್ಬೀರ್ ಮುಸ್ತಫ, ದಲಿತ ಮುಖಂಡ ಪುರುಷೋತ್ತಮ್, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಪತ್ರಕರ್ತರುಗಳಾದ ಟಿ.ಗುರುರಾಜ್, ಕೆ.ದೀಪಕ್, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪಿಎಫ್‍ಐ ಮುಖಂಡ ಕಲೀಂ, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೆ ಇಳಿಜಾರಿನ ಮೇಲಿನ ತುದಿಯಲ್ಲಿ ಕುಳಿತು ನಗುತಿದ್ದೀರಿ, ಜಾರಿ ಬೀಳುವ ಕಾಲ ದೂರ ಇಲ್ಲ.
-ಟಿ.ಗುರುರಾಜ್, ಪತ್ರಕರ್ತ.ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪೂರ್ವಿಕರು ಈ ದೇಶದ ನುಸುಳುಕೋರರು. ಅವರು ಬೇರೆ ದೇಶದಿಂದ ನಮ್ಮ ದೇಶಕ್ಕೆ ನುಸುಳಿಕೊಂಡು ಬಂದಿದ್ದಾರೆ. ಇಂತಹ ನುಸುಳುಕೋರರ ಸಂತತಿ ಇಂದು ನಮ್ಮ ದೇಶವನ್ನು ಆಳುತ್ತಿದೆ. ನಾವು ಈ ದೇಶದ ಮೂಲನಿವಾಸಿಗಳು. ನಾವೆಲ್ಲರೂ ಸಂಘಟಿತರಾಗಿ ಇವರುಗಳನ್ನು ಎದುರಿಸಬೇಕಾಗಿದೆ
-ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಗತಿಪರ ಚಿಂತಕ








