ಹಳಿ ತಪ್ಪಿದ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು: ತಪ್ಪಿದ ಅನಾಹುತ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.26: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಸೂಪರ್ ಫಾಸ್ಟ್ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ನಗರದ ಬಿನ್ನಿಮಿಲ್ ಮಾರ್ಗ ಮಧ್ಯೆ ಹಳಿ ತಪ್ಪಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲವೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವೇಳೆ ರೈಲ್ವೆ ನಿಲ್ದಾಣ ಹತ್ತಿರ ಇದ್ದಂತೆ ಹಳಿ ತಪ್ಪಿದೆ. ಆದರೆ, ಚಾಲಕನ ಮುಂಜಾಗ್ರತೆಯಿಂದಾಗಿ ಹೆಚ್ಚಿನ ಅನಾಹುತವಾಗಿಲ್ಲವೆಂದು ನೈರುತ್ಯ ರೈಲ್ವೆ ಜನರಲ್ ಮ್ಯಾನೆಜರ್ ಶ್ರೀಧರ್ ಮೂರ್ತಿ ಮಾಹಿತಿ ನೀಡಿದ್ದಾರೆ.
ರೈಲಿನಲ್ಲಿ ಬೆಂಕಿ: ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಚಿಕ್ಕಬಾಣವಾರ ರೈಲು ನಿಲ್ದಾಣದಲ್ಲಿ ನಡೆದಿದೆ. ಯಶವಂತಪುರದಿಂದ ಬಿಕಾನೇರ್ ಮಾರ್ಗದ ರೈಲಿನ ಎಸಿ ಬೋಗಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲಿನ ಎಸಿ ಬೋಗಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ನಂದಿಸಲಾಗಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಇದಕ್ಕೆ ಏನು ಕಾರಣ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತದೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.







