ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಹಾನಿಗೈದವರ ಆಸ್ತಿ ಜಪ್ತಿ: ಸಚಿವ ಆರ್.ಅಶೋಕ್ ಎಚ್ಚರಿಕೆ

ಬೆಂಗಳೂರು, ಡಿ. 26: ಉತ್ತರ ಪ್ರದೇಶದ ಮಾದರಿಯಲ್ಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿಗೈದವರ ಆಸ್ತಿ ಜಪ್ತಿ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿ ಮಾಡಲಾಗುವುದು. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ನೆಲದ ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಧರ್ಮ ಛತ್ರ ಅಲ್ಲ: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸರಿಯಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಇನ್ನಿತರ ಕಡೆಗಳಿಂದ ಬಂದವರಿಗೆ ಆಶ್ರಯ ನೀಡಲು ಭಾರತ ದೇಶ ಧರ್ಮಛತ್ರ ಅಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸೂರ್ಯಗ್ರಹಣದ ಬಗ್ಗೆ ಅತಿಯಾದ ಮೂಢನಂಬಿಕೆ ಸಲ್ಲ. ನಾನು ವಿಜ್ಞಾನ ಮತ್ತು ಸಂಪ್ರದಾಯ ಎರಡನ್ನೂ ನಂಬುತ್ತೇನೆ. ಸೂರ್ಯಗ್ರಹಣ ಇದ್ದರೂ ನಾನು ಬೆಳಗ್ಗೆ ಮನೆಯಲ್ಲಿ ಪೂಜೆ ಮಾಡಿ ಕಚೇರಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಚೇರಿಯಲ್ಲಿ ಯಾವುದೇ ಹೋಮ-ಹವನ ಮಾಡುವುದಿಲ್ಲ ಎಂದು ಅಶೋಕ್ ಸ್ಪಷ್ಟಣೆ ನೀಡಿದರು.







