ಶ್ರೀರಾಮ ಮಂದಿರ ಜನರ ಮಂದಿರವಾಗಲಿ: ವಿಎಚ್‌ಪಿ
ಮಂಗಳೂರು, ಡಿ.26: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಸರಕಾರದ ಹಣ, ಹಸ್ತಕ್ಷೇಪವಿಲ್ಲದೆ ಸ್ವತಂತ್ರ ಟ್ರಸ್ಟ್ ಮೂಲಕ ನಡೆಯಬೇಕು. ಸಾರ್ವಜನಿಕರ ದೇಣಿಗೆಯಿಂದ ಜನರ ಮಂದಿರವಾಗಿ ಮೂಡಿಬರಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪೆರಾಂಡೆ ತಿಳಿಸಿದ್ದಾರೆ.
ನಗರದ ಸಂಘನಿಕೇತನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ 1984ರಿಂದ ರಾಮ ಮಂದಿರ ನಿರ್ಮಾಣ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಇದರ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಕೂಡ ಜನ್ಮಭೂಮಿ ಪರವಾಗಿ ತೀರ್ಪು ನೀಡಿದೆ. ಇದು ಹಿಂದೂಗಳ ನಂಬಿಕೆಯ ವಿಷಯವಾದ ಕಾರಣ, ನಾವು ಹೇಳಿದಂತೆ ಮಂದಿರ ಆಗಬೇಕು. ಸರಕಾರಿ ಮಂದಿರ ಆಗಬಾರದು ಎಂದು ತಿಳಿಸಿದರು.
ಮಂಗಳೂರಿನಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್‌ನ ವಿಶ್ವಸ್ತ ಮಂಡಳಿ ಬೈಠಕ್‌ನಲ್ಲಿ ಸಂಘಟನೆಯ ಪ್ರಮುಖ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಯಲಿವೆ. ರಾಮ ಮಂದಿರ ನಿರ್ಮಾಣ, ಸಿಎಎ ಪರವಾಗಿ ಜನಜಾಗೃತಿ, ವಿಎಚ್‌ಪಿ ಸೇವಾ ಕಾರ್ಯಗಳ ವಿಸ್ತರಣೆ, ಮತಾಂತರ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಗೋಹತ್ಯೆ ತಡೆ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ದೇಶ ವಿಭಜನೆ ಸಂದರ್ಭ ನಡೆದಿದ್ದ ಐತಿಹಾಸಿಕ ತಪ್ಪನ್ನು ಸಿಎಎ ಜಾರಿ ಮೂಲಕ ಸರಿಪಡಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದ್ದು, ಅದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಈ ಕಾಯ್ದೆಯಿಂದ ದೇಶಕ್ಕೆ ನಿರಾಶ್ರಿತರಾಗಿ ಬಂದಿರುವ ಮೂರು ಕೋಟಿ ಮಂದಿಗೆ ಪೌರತ್ವದ ಮೂಲಕ ನ್ಯಾಯ ಸಿಗಲಿದೆ. ಈ ಕಾಯ್ದೆ ಮುಸ್ಲಿಂ ವಿರೋಧಿ ಅಲ್ಲ. ಆದರೆ, ಬಾಂಗ್ಲಾ, ಅಫ್ಘಾನ್ ಮತ್ತು ಪಾಕ್‌ನಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರಿಗೆ ತಕ್ಷಣಕ್ಕೆ ಪೌರತ್ವ ಸಿಗಲಾರದು ಎಂದು ಅವರು ಹೇಳಿದರು.
ದೇಶದಲ್ಲಿ ಆರು ಲಕ್ಷ ಗ್ರಾಮಗಳಿದ್ದರೆ, ಒಂದು ಲಕ್ಷ ಗ್ರಾಮದಲ್ಲಿ ವಿಎಚ್‌ಪಿ ಸೇವಾ ಚಟುವಟಿಕೆ ನಡೆಯುತ್ತಿದೆ. ಅದನ್ನು ಇನ್ನಷ್ಟು ಗ್ರಾಮಗಳಿಗೆ ವಿಸ್ತರಣೆ ಮಾಡಲಾಗುವುದು. ಕೆಲವು ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿ ಮತ್ತು ಮುಸಲ್ಮಾನರಿಂದ ಹಿಂದೂಗಳ ಮತಾಂತರ ನಡೆಯುತ್ತಿದೆ. ಇದನ್ನು ತಡೆಯುವ ಜತೆ, ಹಿಂದೂ ಧರ್ಮಕ್ಕೆ ಮರಳಿ ಬರುವವರನ್ನು ಸ್ವಾಗತ ಮಾಡಲಾಗುವುದು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಗೆ, ಗೌರವ ಹೆಚ್ಚಿಸುವ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿಯ ಕೇಂದ್ರೀಯ ಜಂಟಿ ಕಾರ್ಯದರ್ಶಿ ವಿಜಯ್ ಶಂಕರ್ ಉಪಸ್ಥಿತರಿದ್ದರು.