ಮಂಗಳೂರು ಗೋಲಿಬಾರ್ ಪ್ರಕರಣ: ಸಿಐಡಿ ಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ತನಿಖೆ

ರಾಹುಲ್ ಕುಮಾರ್
ಮಂಗಳೂರು, ಡಿ.26: ನಗರದಲ್ಲಿ ಡಿ.19ರಂದು ನಡೆದ ಹಿಂಸಾಚಾರ-ಗೋಲಿಬಾರ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿ ಮತ್ತು ಮ್ಯಾಜಿಸ್ಟ್ರೇಯಲ್ಗೆ ನೀಡಿದ್ದು, ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್ವಾಡ್ ನೇತೃತ್ವದ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದೆ.
ಪೌರತ್ವ ಕಾಯ್ದೆ ತಿದ್ದುಪಡಿಸಿ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ಒಟ್ಟು 12 ಮಂದಿಯನ್ನು ಈಗಾಗಲೇ ಮಂಗಳೂರು ಪೊಲೀಸರು ಬಂಧಿಸಿದ್ದು, 30ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಸಿಐಡಿ ಎಸ್ಪಿ ರಾಹುಲ್ ಕುಮಾರ್ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದು, ಶುಕ್ರವಾರದಿಂದ ತನಿಖೆ ಆರಂಭಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರೋಪಿಗಳ ಪತ್ತೆಗೆ ಈಗಾಗಲೇ ಎಸಿಪಿ, ಇನ್ಸ್ಪೆಕ್ಟರ್ಗಳು, ಸಬ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದೆ. ಸಿಐಡಿ ತಂಡವು ಈ ತಂಡಗಳ ಸಹಕಾರ ಪಡೆದುಕೊಳ್ಳುವ ಸಾಧ್ಯತೆಯಿದೆ.
ಡಿ.28ರಿಂದ ಮ್ಯಾಜಿಸ್ಟ್ರೇಟ್ ತನಿಖೆ: ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಮಗ್ರ ತನಿಖೆ ರಾಜ್ಯ ಸರಕಾರ ಸಿಐಡಿ ಮತ್ತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ಗೆ ವಹಿಸಿತ್ತು. ಮ್ಯಾಜಿಸ್ಟ್ರೇಟ್ ತಂಡ ಡಿ.28ರಿಂದ ತನಿಖೆ ಆರಂಭಿಸಲಿದೆ.







