ಪ.ಬಂ:ಕುಲಾಧಿಪತಿ ಜಗದೀಪ್ ಧಂಕರ್ ಅವರನ್ನು ಬಹಿಷ್ಕರಿಸಲು ಜೆಯು ವಿದ್ಯಾರ್ಥಿಗಳ ನಿರ್ಧಾರ

file photo
ಕೋಲ್ಕತಾ,ಡಿ.26: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರ ವಿರುದ್ಧ ಸಮರ ಸಾರಿರುವ ಜಾದವಪುರ ವಿವಿಯ ವಿದ್ಯಾರ್ಥಿಗಳು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅವರ ನಿಲುವು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅವರನ್ನು ವಿವಿಯ ಕುಲಾಧಿಪತಿ ಹುದ್ದೆಯಿಂದ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಧಂಕರ್ ವಿವಿಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ಪ್ರತಿಭಟನಾಕಾರರು ತಡೆದಿದ್ದ ಡಿ.24ರಂದು ಅವರಿಗೆ ಇ-ಮೇಲ್ ರವಾನಿಸಿರುವ ಕಲಾ ವಿಭಾಗದ ವಿದ್ಯಾರ್ಥಿಗಳ ಒಕ್ಕೂಟ (ಎಎಫ್ಎಸ್ಯು)ವು,‘ನಿಮಗೆ ನಮ್ಮ ಕ್ಯಾಂಪಸ್ನಲ್ಲಿ ಪ್ರವೇಶವಿಲ್ಲ ’ಎಂದು ತಿಳಿಸಿದೆ.
ವಿವಿಧ ಸಮಕಾಲೀನ ವಿಷಯಗಳ ಕುರಿತು ರಾಜ್ಯಪಾಲರ ನಿಲುವುಗಳನ್ನು ವಿರೋಧಿಸಿರುವ ಪತ್ರವು,ನೀವು ನಿಷ್ಪಕ್ಷಪಾತ ಸಾಂವಿಧಾನಿಕ ಮುಖ್ಯಸ್ಥರಂತೆ ನಡೆದುಕೊಳ್ಳುತ್ತಿಲ್ಲ ಮತ್ತು ನಿಮ್ಮ ವರ್ತನೆಯು ವಿದ್ಯಾರ್ಥಿಗಳ ಹಿತರಕ್ಷಣೆಗೆ ಪೂರಕವಾಗಿಲ್ಲ, ಹೀಗಾಗಿ ನಿಮಗೆ ನಮ್ಮ ಕ್ಯಾಂಪಸ್ನಲ್ಲಿ ಸ್ವಾಗತವಿಲ್ಲ ’ಎಂದು ತಿಳಿಸಿದೆ.
ರಾಜ್ಯಪಾಲರ ಕಾರ್ಯ ನಿರ್ವಹಣೆ ಕುರಿತು ‘ರಿಪೋರ್ಟ್ ಕಾರ್ಡ್’ಸಿದ್ಧಪಡಿಸಲಾಗುವುದು ಮತ್ತು ಅವರನ್ನು ಜೆಯುದಂತಹ ಪ್ರತಿಷ್ಠಿತ ಸಂಸ್ಥೆಗಳ ಕುಲಾಧಿಪತಿ ಹುದ್ದೆಯಿಂದ ಸಾಂಕೇತಿಕವಾಗಿ ಹೊರದಬ್ಬುವ ನಿರ್ಣಯದೊಂದಿಗೆ ಬಹಿರಂಗ ಪತ್ರವನ್ನು ಅದಕ್ಕೆ ಲಗತ್ತಿಸಲಾಗುವದು ಎಂದು ಎಎಫ್ಎಸ್ಯು ನಾಯಕ ಉಷಷಿ ಪಾಲ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಮಮತಾ ಬ್ಯಾನರ್ಜಿ ಸರಕಾರ ಮತ್ತು ಜೆಯು ವಿದ್ಯಾರ್ಥಿಗಳೊಂದಿಗೆ ಆಗಾಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಧಂಕರ್ ಸೋಮವಾರ ವಿವಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ‘ಯುನಿವರ್ಸಿಟಿ ಕೋರ್ಟ್’ನ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ವಿದ್ಯಾರ್ಥಿಗಳು ಅವರಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದರು. ಮರುದಿನ ಘಟಿಕೋತ್ಸವದಲ್ಲಿ ಭಾಗವಹಿಸುವುದನ್ನೂ ತಡೆದಿದ್ದರು. ಈ ವೇಳೆ ಧಂಕರ್ ಅವರು ‘ಕಾನೂನಿನ ಆಡಳಿತ ಸಂಪೂರ್ಣವಾಗಿ ಕುಸಿದಿದೆ ’ಎಂದು ಆರೋಪಿಸಿದ್ದರು. ಬಳಿಕ ಕುಲಪತಿಗಳ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ನಡೆದಿತ್ತು.







