2020ರ ಏಪ್ರಿಲ್‌ನಿಂದ ಮನೆ ಪಟ್ಟಿ ಪ್ರಕ್ರಿಯೆ ಪ್ರಾರಂಭ, 2021ರ ಫೆ.9ರಿಂದ ಜನಗಣತಿ

ಬೆಂಗಳೂರು, ಡಿ.26: ಜನಗಣತಿಯು ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆಯಾಗಿದ್ದು, 2021ರ ಜನಗಣತಿಯು 16ನೇ ಜನಗಣತಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2020ರ ಏಪ್ರಿಲ್ ತಿಂಗಳಿಂದ ಮನೆಪಟ್ಟಿ ತಯಾರಿಕೆ ಮತ್ತು 2021ರ ಫೆಬ್ರವರಿಯಿಂದ ಜನಸಂಖ್ಯಾ ಗಣತಿ ನಡೆಯಲಿದೆ ಎಂದು ರಾಜ್ಯ ಜನಗಣತಿ ನಿರ್ದೇಶನಾಲಯದ ನಿರ್ದೇಶಕ ವಿಜಯ್ ಕುಮರ್ ಬಾಳಿಕಟ್ಟಿ ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ಏಪ್ರಿಲ್ 15ರಿಂದ ಮೇ 29ರವರೆಗೆ ಮನೆಗಣತಿ ಪ್ರಕ್ರಿಯೆ ನಡೆಯಲಿದೆ. 2021ರ ಫೆಬ್ರವರಿ 9ರಿಂದ ಫೆಬ್ರವರಿ 28ರವರೆಗೆ ಜನಗಣತಿ ಪ್ರಕ್ರಿಯೆ ನಡೆಯಲಿದೆ. ನಂತರ 2021ರ ಮಾರ್ಚ್ 1ರಿಂದ ಮಾರ್ಚ್ 5ರವರೆಗೆ ಜನಗಣತಿ ಮತ್ತು ಮನೆ ಗಣತಿಯ ಪರಿಷ್ಕರಣೆ ನಡೆಯಲಿದೆ ಎಂದು ವಿವರಿಸಿದರು.
2021ರ ಜನಗಣತಿಯನ್ನು ಆ್ಯಪ್ ಮೂಲಕ ಡಿಜಿಟಲ್ ಸೆನ್ಸಸ್ ಆಗಿ ಪರಿವರ್ತಿಸಲು ಸರಕಾರ ಮುಂದಾಗಿದೆ. ಕಾಗದ ರಹಿತ ಮತ್ತು ಸಮಸ್ಯೆಯಿಲ್ಲದ ಸೇವೆಗಳನ್ನು ಸರಕಾರ ಪರಿಚಯಿಸುತ್ತಿದ್ದು, ಅದರಲ್ಲಿ ವಿಶೇಷ ಆ್ಯಪ್ ರೂಪಿಸಿ, ಅದರ ಮೂಲಕ ಮುಂದಿನ 2021ರ ಗಣತಿಯನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿ ನಡೆಸಲಾಗುವುದು. ಇದರ ಜತೆಗೆ ಸಾಂಪ್ರದಾಯಿಕವಾಗಿ ನಡೆಸುತ್ತಿದ್ದ ಹಳೆಯ ಮಾದರಿಯ ಜನಗಣತಿ ವ್ಯವಸ್ಥೆ ಇರಲಿದೆ. ಇದರಿಂದ ನೂತನ ಮತ್ತು ಅತ್ಯಾಧುನಿಕ ಆಯ್ಕೆಗಳುಳ್ಳ, ಸರಳ ಡಿಜಿಟಲ್ ಗಣತಿ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ಜನಗಣತಿ ಮತ್ತು ಮನೆಗಣತಿ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ನಿಗದಿತ ಸಮಯದೊಳಗೆ ನಿರ್ವಹಿಸಿ ಯಾವುದೇ ಲೋಪಗಳಿಲ್ಲದಂತೆ ಯಶಸ್ವಿಯಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು
ಗಣತಿಗೆ ಶಿಕ್ಷಕರ ಬಳಕೆ: ಗಣತಿದಾರರು ಸಾಮಾನ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರೇ ಆಗಿದ್ದು, ಪ್ರತಿ ಆರು ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗುವುದು. ಮೇಲ್ವಿಚಾರಕರು ಸಾಮಾನ್ಯವಾಗಿ ಪ್ರೌಢಶಾಲಾ ಶಿಕ್ಷಕರು ಅಥವಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿರುವರು ಎಂದು ಅವರು ಮಾಹಿತಿ ನೀಡಿದರು. ಎನ್‌ಪಿಆರ್‌ಗೆ ದಾಖಲೆ ಬೇಡ: ನ್ಯಾಷನಲ್ ಪಾಫುಲೇಷನ್ ರಿಜಿಸ್ಟರ್‌ಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಸೂಚನೆ ಕೊಟ್ಟರೆ ಸಾಕು. ನಿಮ್ಮ ಮನೆಯಲ್ಲಿ ಇರುವ ಜನರೆಷ್ಟು, ಲಿಂಗ, ಜಾತಿ, ವ್ಯವಹಾರ, ಉದ್ಯೋಗ, ಮೊಬೈಲ್ ನಂಬರ್ ಸೇರಿದಂತೆ ಇನ್ನಿತರ ಮಾಹಿತಿ ನೀಡಿದರೆ ಸಾಕು ಎಂದು ವಿಜಯ್ ಕುಮಾರ್ ಸ್ಪಷ್ಟಪಡಿಸಿದರು.
ಪ್ರತ್ಯೇಕ ಆ್ಯಪ್ ಬಳಕೆ: ಜನಗಣತಿಗಾಗಿ ಪ್ರತ್ಯೇಕ ಆ್ಯಪ್ ಪ್ರಾರಂಭವಾಗಲಿದ್ದು, ಅದರಲ್ಲಿ ಜನರು ಸ್ವಯಂ ಆಗಿ ಮಾಡಿಕೊಳ್ಳಬಹುದು. ಜನಗಣತಿಯ ಆ್ಯಪ್ ಮೂಲಕ ಸಾರ್ವಜನಿಕರು ಅದರಲ್ಲಿ ಕೇಳುವ ದಾಖಲೆಗಳನ್ನು ನೀಡುವ ಮೂಲಕ ಸ್ವಯಂಕೃತವಾಗಿ ಜನಗಣತಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜನಗಣತಿ ಮತ್ತು ಮನೆಗಣತಿಗಾಗಿ Census- 2021 houselist, Census- 2021 household, Census- 2021 NRP ಎಂಬ ಮೂರು ಮೊಬೈಲ್ ಅಫ್ಲಿಕೇಷನ್‌ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 2021ರ ಜನಗಣತಿಯನ್ನು 19,289 ಶಿಕ್ಷಕರು(ಎಣಿಕೆದಾರರು) ಮಾಡಬೇಕಾದ ಅಂದಾಜಿದೆ. ಜನಗಣತಿಯನ್ನು ಮೂರು ವಿಧಗಳಲ್ಲಿ ಮಾಡಬಹುದಾಗಿದ್ದು, ಎಣಿಕೆದಾರರು ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆಮನೆಗೆ ತೆರಳಿ ಮಾಡುವುದು, ಪೇಪರ್ ಮೂಲಕ ಮಾಡುವುದು ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಸ್ವತಃ ಮನೆಯವರೇ ಮಾಹಿತಿಯನ್ನು ನಮೂದಿಸಬಹುದಾಗಿದೆ.
-ವಿಜಯ್‌ಕುಮರ್ ಬಾಳಿಕಟ್ಟಿ, ರಾಜ್ಯ ಜಗಣತಿ ನಿರ್ದೇಶನಾಲಯದ ನಿರ್ದೇಶಕ







