ಮೋದಿ ಸರ್ಕಾರ ಮುಸ್ಲಿಮರು, ದಲಿತರು, ಹಿಂದುಳಿದವರನ್ನು ಪ್ರತ್ಯೇಕಿಸುತ್ತಿದೆ: ನೂತನ ಶಾಸಕ ಮಂಜುನಾಥ್

ಮೈಸೂರು,ಡಿ.26: ಕೇಂದ್ರದ ಮೋದಿ ನೇತೃತ್ವದ ಸರ್ಕಾರ ವಿವಿಧ ಕಾಯ್ದೆಗಳ ಮೂಲಕ ಮುಸ್ಲಿಮರು, ದಲಿತರು ಮತ್ತು ಹಿಂದುಳಿದವರನ್ನು ಪ್ರತ್ಯೇಕಿಸುತ್ತಿದೆ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಕಿಡಿಕಾರಿದರು.
ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರ 63ನೇ ಪರಿನಿಬ್ಬಾಣದ ದಿನದ ಅಂಗವಾಗಿ ಆಯೋಜಿಸಿದ್ದ “ಸಂವಿಧಾನ ಸಾಮಾಜಿಕ ನ್ಯಾಯ ದಿನಾಚರಣೆ” ಮೀಸಲಾತಿ ಹೆಚ್ಚಳ ಕೆನೆಪದರ ಕುರಿತು ಮುಕ್ತ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರವು ಸಂವಿಧಾನಾತ್ಮಕವಾಗಿ ಇರುವ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ಕೊಂಡೊಯ್ದಿದೆ. ಸಾಮಾನ್ಯ ಜನರ ಜೀವನವನ್ನು ದುಸ್ತರ ಮಾಡಿದೆ. ಮೂರು ತಿಂಗಳಿಗೊಂದು ಹೊಸ ವಿಷಯವನ್ನು ಜನರ ಮುಂದಿಟ್ಟು ಅವರ ಭಾವನೆಗಳೊಂದಿಗೆ ಆಟವಾಡುತ್ತ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಸತ್ಯವನ್ನು ಮರೆಮಾಚುತ್ತ ಅಧಿಕಾರವನ್ನು ದುರುಪಯೋಗ ಮಾಡಿ ಮಾಡಿಕೊಳ್ಳುತ್ತಿದೆ. ಯೋಧರ ಹೆಸರಿನಲ್ಲೂ ಕೂಡ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರಿಗೆ ಯಾರ ಸಿಂಪತಿಯ ಅವಶ್ಯಕತೆ ಬೇಡ. ಅವರಿಗೆ ಬೇಕಿರುವುದು ಸಾಮಾಜಿಕ ನ್ಯಾಯ. ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಂತರ ದಲಿತರು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸೌಲಭ್ಯ ಹಾಗೂ ಯೋಜನೆಗಳನ್ನು ನೀಡಿದವರು ಸಿಎಂ ಸಿದ್ದರಾಮಯ್ಯ ನವರು. ಅವರ ಅವಧಿಯಲ್ಲಿ ಎಸ್ಸಿ ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಇದ್ದ ಅನುದಾನವನ್ನು 25,000 ಕೋಟಿಗಳಿಗೆ ಹೆಚ್ಚಿಸಿದರು. ಆಮೂಲಕ ದಲಿತ ವರ್ಗದವರನ್ನು ಮೇಲೆತ್ತಲು ಶ್ರಮಿಸಿದರು ಎಂದರು.
ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ನೆರೆಯ ಹೆಸರಿನಲ್ಲಿ ಅನುದಾನಕ್ಕೆ ಕೈ ಹಾಕುವ ಆ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರು ವಿವಿಧ ಒಳ ಜಗಳಗಳನ್ನು ಬಿಟ್ಟು ಸಂಘಟಿತರಾಗುವ ಮೂಲಕ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತಬೇಕು. ಆ ಮೂಲಕ ಸರ್ಕಾರ ಸೌಲಭ್ಯಗಳನ್ನು ಸೌಲಭ್ಯಗಳನ್ನು ಪವೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೀಸಲಾತಿ ಹೆಚ್ಚಳ ಕೆನೆಪದರ ಕುರಿತು ವಿಚಾರ ಮಂಡಿಸಿದ ಬೆಂಗಳೂರಿನ ಯೋಜನಾ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರಯ್ಯ ಅವರು, ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಿಂದ ಸಾವಿರಾರು ದಲಿತ ದಲಿತ ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿದೆ. ಕೆನೆಪದರ ಹೆಸರಿನಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ವಾದ ಭಡ್ತಿ ಮೀಸಲಾತಿಯಿಂದ ಸಮುದಾಯದ ನೌಕರರನ್ನು ಕಡೆಗಣಿಸುತ್ತಿದೆ. ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಈಗಿನ ಮುಖ್ಯ ಕಾರ್ಯದರ್ಶಿಗಳು ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಹೈಕೋರ್ಟ್ ವಕೀಲ ಮಂಜುನಾಥ್ ದಲಿತರ ಸಮಸ್ಯೆಗಳ ಕುರಿತು ಮಾತನಾಡಿದರು. ದಸಂಸ ಜಿಲ್ಲಾ ಕಾರ್ಯದರ್ಶಿ ಕಾರ್ಯ ಬಸವಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಮೋಹನ್ ಕುಮಾರ್, ಎಂ.ಸುನೀತಾ, ನಾಗಣ್ಣ ಬಡಿಗೇರ್, ಸೋಮಣ್ಣ ಬನ್ನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







