ಬಿಬಿಎಂಪಿಯ ಏಕೀಕೃತ ‘ನಮ್ಮ ಬೆಂಗಳೂರು' ಆ್ಯಪ್ ಅಭಿವೃದ್ಧಿ
ಬೆಂಗಳೂರು, ಡಿ.26: ನಗರದ ನಾಗರಿಕರ ಕುಂದು ಕೊರತೆಗಳನ್ನು ಬಗೆಹರಿಸಲು ಬಿಬಿಎಂಪಿಯು ಏಕೀಕೃತ ‘ನಮ್ಮ ಬೆಂಗಳೂರು’ ಆ್ಯಪ್ ಅಭಿವೃದ್ಧಿಪಡಿಸಿದ್ದು, ವಿವಿಧ ಏಜೆನ್ಸಿಗಳಲ್ಲಿ ಸಿಗುವ ಕಾಮನ್ ಅಪ್ಲಿಕೇಶನ್‌ನಲ್ಲಿ ಇದು ಲಭ್ಯವಾಗಲಿದೆ.
ಹೊಸ ವರ್ಷದಿಂದ ಬಳಕೆಗೆ ಸಿಗಲಿರುವ ಏಕೀಕೃತ ಕಾಮನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೂಲಕ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್, ಬಿಟಿಪಿ ಮತ್ತು ಇತರೆ ಏಜೆನ್ಸಿಗಳಿಂದ ಮಾಹಿತಿ, ಸಹಾಯವನ್ನು ಒಂದೇ ವ್ಯವಸ್ಥೆಯಲ್ಲಿ ಪಡೆಯಬಹುದಾಗಿದೆ.
ಈ ಆ್ಯಪ್ ಬಳಕೆದಾರ ಸ್ನೇಹಿಯಾಗಿದ್ದು, ಇದರಿಂದ ಸರಕಾರಿ ಸೇವೆಗಳ ಮಾಹಿತಿಯನ್ನು ಪಡೆಯಬಹುದು. ಎಲ್ಲ ಏಜೆನ್ಸಿಗಳ ಸೇವಾ ಮಾಹಿತಿಯೂ ಕೂಡಾ ಈ ಆ್ಯಪ್‌ನಲ್ಲಿ ಲಭ್ಯವಾಗಲಿದೆ.
ಯಾವ್ಯಾವ ಸೇವೆ: ಬಿಬಿಎಂಪಿಯ ಎಲ್ಲ ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ. ಪ್ರಮುಖವಾಗಿ ಸಾಮಾನ್ಯ ಮಾಹಿತಿಗಳಾದ ನಾಗರಿಕರ ಅರ್ಜಿಗಳು, ಕ್ರಮಗಳು, ವಾರ್ಡ್ ಮಾಹಿತಿ ಮತ್ತು ಸಿಬ್ಬಂದಿಗಳ ವಿವರ, ಪಾಲಿಕೆ ಸದಸ್ಯರ ಮಾಹಿತಿ, ಸಹಾಯ. ಕುಂದು ಕೊರತೆಗಳು (ಪರಿಷ್ಕರಿಸಿದ ಆವೃತ್ತಿ), ಆಸ್ತಿ ತೆರಿಗೆ, ಆನ್‌ಲೈನ್ ಅರ್ಜಿಗಳಾದ ಮ್ಯುಟೇಶನ್, ಹೊಸ ಖಾತೆ ನೋಂದಣಿ ಮತ್ತು ಡೆಲಿವರಿ ಟ್ರ್ಯಾಕಿಂಗ್, ವ್ಯಾಪಾರ ಪರವಾನಿಗೆ, ಬಿಬಿಎಂಪಿ-ಸ್ವಂತ ಅಂಗಡಿ, ಮಾರುಕಟ್ಟೆ ಬಾಡಿಗೆ, ಸುದ್ದಿಗಳು, ಅಧಿಸೂಚನೆಗಳು ಮತ್ತು ಜಾಗೃತಿ ಮಾಹಿತಿ.
ಹತ್ತಿರದ ಸಾರ್ವಜನಿಕ ಶೌಚಾಲಯ, ಪೇಮೆಂಟ್ ಕಿಯಾಸ್ಕ್‌ಗಳು, ಕೌಂಟರ್‌ಗಳು, ಕಸ ಸಂಗ್ರಹಣೆ ಸ್ಥಳ, ಆಸ್ಪತ್ರೆಗಳು, ಶಾಲೆಗಳನ್ನು ಜಿಪಿಎಸ್ ಮೂಲಕ ಗುರುತಿಸಬಹುದು. ಸಲಹೆ ಪೆಟ್ಟಿಗೆಗಳು, ಪ್ರತಿಕ್ರಿಯೆಗಳು. ಮುಂಬರಲಿರುವ ಬಿಬಿಎಂಪಿ ಕಾರ್ಯಕ್ರಮಗಳು. ಚಿತಾಗಾರಗಳ ಮಾಹಿತಿ ಮತ್ತು ಕಾರ್ಯ ನಿರ್ವಹಣಾ ಸ್ಥಿತಿ. ಹುಟ್ಟಿದ ದಿನ, ಸಾವಿನ ದಿನದ ಸರ್ಟಿಫಿಕೇಟ್‌ಗೆ ಬಿಬಿಎಂಪಿ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿ, ಮರಗಳ ಕಡಿತಕ್ಕೆ ಮಾರ್ಗಸೂಚಿ, ನಿಯಮಗಳು ಮತ್ತು ದೂರುಗಳು. ಬೃಹತ್ ಕಸ ಸಂಗ್ರಹಣೆ ನಿರ್ವಹಣೆ. ಬಿಬಿಎಂಪಿಯಿಂದ ನಡೆಸಲ್ಪಡುವ ಆಸ್ಪತ್ರೆ ಘಟಕಗಳಲ್ಲಿ ಓಪಿಡಿ ಅಪಾಯಿಂಟ್‌ಮೆಂಟ್, ಸ್ವಯಂ ಸೇವಾ ನೋಂದಣಿ, ಯೋಜಿತ ಸಾರ್ವಜನಿಕ ಯೋಜನೆಗಳ ಮಾಹಿತಿ. ಸರಕಾರಿ ಇಲಾಖೆಗಳ ಬ್ಲಾಗ್‌ಗಳು, ಲಿಂಕ್‌ಗಳು, ಫೋರಂಗಳು, ತುರ್ತು ಸೇವೆ ಮತ್ತು ಅದರ ಕಾರ್ಯವನ್ನು ಅರಿಯುವ ಮಾಹಿತಿಗಳನ್ನು ಪಡೆಯಬಹುದಾಗಿದೆ.







